Saturday, June 23, 2018

ಕವಿತೆ: ವಿಯೆನ್ನದ ಬೆಳಗು!

            ವಿಯೆನ್ನದ ಬೆಳಗು!


ಬೆಳಗಿನ ಹೊತ್ತು,
ಸಪ್ತ ಸಾಗರದಾಚೆಯೆಲ್ಲೊ, ಸ್ನಿಗ್ದ ನಗರದ ನಡುವೆಯೆಲ್ಲೊ!
ವಿಹರಿಸಲು, ವಿರಮಿಸಲು, ಸಂಗಾತಿಗೆನೆ ಕಾಯುತ್ತ
ಉದ್ದಗಲ ರಸ್ತೆಯಲಿ, ನೋಟ ಅತ್ತಿತ್ತ ಹರಿಸುತ್ತ
ಬಸ್ ತಂಗುದಾಣದಲಿ ಒಬ್ಬನೆ ಕುಳಿತಿದ್ದೆ

ಹೊತ್ತೇರೆ,
ತಿಳಿ ನೀಲಿ ಆಕಾಶ, ರವಿ ತೇಜ ಸುಪ್ರಕಾಶ
ಇಂತಿದ್ದು, ಕೊರೆವ ಚಳಿ, ಗಾಳಿ
ಏಕಾಂತದಿ ಮನಸೆಲ್ಲೊ ತೇಲಿ
ಮೆಲ್ಲನೆ ಬಿಗಿಯಿತು, ಮನದ ಸುತ್ತಲೂ ಮುಳ್ಳಿನ ಬೇಲಿ
ಹೊರಳಿತು, ಉರುಳಿತು, ’ಬದುಕು ಜಟಕಾ ಬಂಡಿ’ಯ ಗಾಲಿ!

ಸ್ತಬ್ದ ವಾತಾವರಣ!

ಉದುರುವ ತರಗಲೆಯೊ, ಪೋಕರಿಗಳ ತರಲೆಯೊ
ಅತ್ತಿತ್ತ ಹರಿದಾಡೊ ಗಾಡಿಗಳ ಮೊರೆತವೊ!... ಹೀಗೆ ನಡುನಡುವೆ ಹಗರಣ!

ಸುಮ್ಮನೆ ಕುಳಿತ ಮನ, ಬೆಚ್ಚುತ ಒಮ್ಮೊಮ್ಮೆ, ಬೆದರುತ ಹೀಗೊಮ್ಮೆ, ಬೆರಗುತ ಹಾಗೊಮ್ಮೆ,
ಬಾಳ ಹಾದಿಯ ’ಅನಾವರಣ’!

ಬಾಲ್ಯ ತಾರಣ, ಸ್ನೇಹ ಚಾರಣ,
ಪ್ರಣಯ ಹೂರಣ, ಹಸಿರು ತೋರಣ,
ಜೀವ ಅನುಪಮ, ಭಾವ ಪೂರ್ಣಿಮ...ಹೀಗೆ ಸಾಗುತ್ತ.ಅ.ಅ.ಅ...

ಮೂಡಿತು ತಿರುವು, ದೂರ ದೂರಕ್ಕೂ ಮುಗಿಯದ ಹರವು!
ಬೇಡದ ನೆನಪುಗಳು, ಚೂರಾದ ಕನಸುಗಳು
ಒಸಗೆಯ ನೆಪದಲ್ಲಿ ಕಿತ್ತೊಗೆದ ಬೆಸುಗೆಗಳು
ಸಂಕೀರ್ಣ ಸುಳಿಯಲ್ಲಿ ನಲುಗಿದ ಬಯಕೆಗಳು
ಪುಂಖಾನುಪುಂಖದೊಲು ಮುಗಿಯದ ಬವಣೆಗಳು!

ಎನಿಸಿತು,
ಹೇಗಿದ್ದರೆ ಏನ್, ಏನಿದ್ದರೆ ಏನ್, ಎಲ್ಲಿದರೆ ಏನ್
ಇದು ಸಂಸರಣ! ಎಲ್ಲ ಸಂವರಣ! ಇಲ್ಲ ಸಂಸ್ಕರಣ!
ಬಿಡದು ’ಅರ್ಧ ಸತ್ಯ’ದ ಗ್ರಹಣ!
ಹೀಗೇನೆ, ಇಷ್ಟೇನೆ, ಈ ಬಾಳಿನ ’ಆವರಣ’
********************
ಘಳಿಗೆಗಳು ಹೊರಳುತ್ತ, ಭಾವದಲೆ ಮಿತಿಮೀರಿ
ಕುಸಿದು ನಿಂತಿತು ಗಾಲಿ, ಕೊಚ್ಚಿ ಹೋಯಿತು ಬೇಲಿ
ಮೆಲ್ಲ ಮೆಲ್ಲನೆ ಭ್ರಾಂತ ಮನ ಆಯಿತು ಶಾಂತ
ನೋಡ ನೋಡುತ್ತ ಮರಳಿದನು ’ಸಂತ’ ನಿಶ್ಚಿಂತ!


ರಚನೆ - ಸಂತ (ಸ.ಗು.ಸಂತೋಷ್)
ತಾರೀಖು - ೧೫/೧೦/೧೧

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...