ಈ ಬಂಧನ
ಬೆನ್ನ ಮೇಲೆ ಕೂಸು ಮರಿ, ಮೊಗದ ತುಂಬ ಮಂದಹಾಸ
ಇನಿತು ಇಲ್ಲ ಕೋಪ ತಾಪ ಮಂಗಮಾಯ ಅಟ್ಟಹಾಸ
ಏನು ಹೇಳು ಕಾರಣ, ಈ ಅಪರೂಪದ ತಾರಣ
ಉಣಿಸಬಹುದೆ ನಿತ್ಯ ನೀನು ಮನಸಿಗಿಂತ ಹೂರಣ
ಗೊಣಗೊಣಗುತ ಜರಿದು ತನ್ನೆ ಶರಣಾಗದೆ ಮ್ಲಾನಕೆ
ಹಾಡಿ ಕುಣಿದು ಮನದ ಹಕ್ಕಿ ಸುಖದಿ ತೇಲಿ ಮೇಲಕೆ
ಯಾವ ಮೂರ್ತಿ ಚೇತನ, ಅದಾವ ಸೃಷ್ಟಿ ಪ್ರೇರಣ!
ಕಾಣಬಹುದೆ ನಿನ್ನ ನೀನು ನೋಡಿ ‘ಸಂತ’ ದರ್ಪಣ!!
ಅವರಿವರನು ಜಪಿಸಿ ಶಪಿಸಿ ಮೊರೆ ಹೋಗದೆ ಮುನಿಸಿಗೆ
ಕಲೆತು ಬೆರೆತು ಜಗವ ಅರಿತು ಮನ ಮಲ್ಲಿಗೆ ವಿಕಸನ
ಹೇಗೆ ಇಂತ ಹೊಸತನ, ‘ಸುಶಾಂತ’ ಮನದ ಸಿರಿತನ
ಆಗಬಹುದೆ ಹೀಗೆ ಸಾಗಿ, ಬಾಳು ನವ ನವೀನ
ನಂದನ!
ಗಣಕಯಂತ್ರ ಹಣದ ಮಂತ್ರ, ಧೂರ್ತ ಭೂತ ಕೈವಶ!
ಎಲ್ಲ ಕಳಚಿ ಹೊಸಬೆಳಕು, ಮನದಂಗಳ ಸುಪ್ರಕಾಶ!
ಹೃದಯಂಗಮ ಸ್ಪಂದನ! ಈ ಪ್ರೀತಿ ಸ್ನೇಹ ಚಂದನ!
ಘಮಿಸಿ ರಮಿಸಿ ನಲಿಸುತಿರಲಿ, ನಮ್ಮ ಹೀಗೆ ಈ
ಬಂಧನ!
ರಚನೆ – “ಸಂತ” (ಸಂತೋಷ ಸ.ಗು)
ತಾರೀಖು – ೨೧/೦೯/೧೭
No comments:
Post a Comment