Sunday, June 10, 2018

ಕವಿತೆ: ಕಾಣದ ಗೋಕುಲ

            ಕಾಣದ ಗೋಕುಲ!

ಅರರೆ! ಭಿತ್ತಿ ಆಚೆಗಿಹ ಮನುಜರಿವರಾರು?
ತಣ್ಣಗೆ ನಿಂತಿಹರೆ ಇವರು! ಅಚಲ! ನಿಶ್ಚಲ!
ನೆಚ್ಚಿ ಒಪ್ಪಿದ ಮಳಿಗೆ, ಇಲ್ಲ ಬಿಸಿಲಿನ ಬೇಗೆ
ಕಾಣಿಸದೆ, ಕೇಳಿಸದೆ ಇದೇನು ನಿರ್ಭಾವ, ಇವರಿಗಿಲ್ಲವೆ ಜೀವ?

ಅರೆಹೊಟ್ಟೆಯಲಿ ಬೆಂದು ಸೋಲುತಿಹ ದನಿಗೆ
ಸೊಪ್ಪು-ಸೆದೆ ಅರಸುತ್ತ ಅಡ್ಡಾಡುತಿಹ ನಮಗೆ
ನೀರ ಸೆಲೆ ತೋರೀತೆ? ಉಣಿಸಿ ತಣಿಸುವವರಾರು?
ಹಸಿರ ನೆಲೆ ಇದ್ದೀತೆ? ಹಾದಿ ತೋರುವವರಾರು?

ಮೂವತ್ತು ಮೂರು ಕೋಟಿ ದೇವರುಗಳು ನಿನ್ನೊಳಗೆ
"ಕಾಮಧೇನು"ವೆ ನೀನು, ತಾಯಿ ನಮೆಲ್ಲರಿಗೆ
ಎಂದೆನುತ ಹಾಡಿ, ಬಾಗಿ ಕರ ಮುಗಿದು ಬೇಡಿ
ಭಯ ಭಕ್ತಿಯಲಿ ಬೆಳೆದ ಮನುಜನ ಸದಾಚಾರ!

ಎಲ್ಲಿ ಹೋಯಿತೊ ಏನೊ! ಏಕೆ ಕರಗಿತೊ ಏನೊ!
ದಟ್ಟ ಕಾನನವಿಲ್ಲ, ಹರಿವ ತೊರೆ-ಝರಿಯಿಲ್ಲ
ಬನಸಿರಿಯ ಸೊಬಗಿಲ್ಲ, ಮಲೆನಾಡ ಸೊಗಸಿಲ್ಲ!
ಇಲ್ಲವಾಗಿದೆಯಲ್ಲ ನಾವು ನೆಚ್ಚಿದ ಗೋಕುಲ

ಏನೂ ತೋಚದು! ಏನಿದೀ ಗ್ರಹಚಾರ!!
ಬದಲಾದ ಮನುಜನ ಆಚಾರ-ವಿಚಾರ
ಹಸಿರಿಲ್ಲ, ಉಸಿರಿಲ್ಲ; ವಿಚಿತ್ರ, ವಿಕಾರ!
ಎಲ್ಲೆಲ್ಲೂ ಮಳಿಗೆ-ಮಹಲುಗಳು ಬೃಹದಾಕಾರ!

ರಚನೆ - ’ಸಂತ’ (ಸ.ಗು.ಸಂತೋಷ್)
ತಾರೀಖು - ೩೧/೦೫/೧೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...