Saturday, June 23, 2018

ಕವಿತೆ: ಹೊಂಬಾಳೆ

              ಹೊಂಬಾಳೆ!!

ಹೊಂಬಿಸಿಲಿನಲ್ಲಿ, ತಂಪೆಲರಿನಲ್ಲಿ ಹರಿಯುತಿದೆ ಪ್ರೀತಿ ಒರತೆ
ಹೊನ್ನುಡಿಯ ನುಡಿವೆ, ಕನ್ನಡಿಯ ಹಿಡಿವೆ ನೋಡಿಲ್ಲಿ ದಿವ್ಯ ಚರಿತೆ!

ಹೊನ್ನೆನಪಿನ ರಂಗು ಹೊಮ್ಮಿ ಚಿಮ್ಮುತ ನೆಚ್ಚುತಲಿ
ಚೆಲುವ ಚಿತ್ತಾರಕೆ ಹಿಗ್ಗಿ ಮನ ಪ್ರತಿನಿತ್ಯ ಚಿತ್ರಿಸಿದೆ
ನಭವಿಳಿದು ಮಡಿಲೇರಿ, ಬೆಳಗಿ, ರಂಗೇರಿ, ನಲಿಸಿ
ಕಲ್ಪನೆಯ ಸಿರಿ ಸಂಚರಿಸಿ ಬರೆಸಲಿ, ಬೆರೆಸಲಿ, ಮೆರೆಸಲಿ!

ಹೊಂಬೆಳಕಿನ ಕಿರಣ ಹಣಿಕಿ ಇಣುಕುತ ನೋಡುತಲಿ
ಇನ ಮೊಗವ ನೋಡೆ ಮನ ಅನುದಿನವು ತಪಿಸುತಿದೆ
ನಿಜವೆನಿಸಿ ಉಷೆ ಬರಲಿ, ಹೊಳೆದು, ತೇಲಾಡಿ, ಬಳಸಿ
ನಂದನದ ಸಿರಿ ಸಿಂಗರಿಸಿ ರಮಿಸಲಿ, ನಡೆಸಲಿ, ಫಲಿಸಲಿ!

ಹೊಂಗನಸಿನ ಮೊಗ್ಗು ಮೆಲ್ಲ ಮೆಲ್ಲನೆ ತೋರುತಲಿ
ಹೂವಾಗಲೆನುತ ಮೃದುಲ ಮನ ಹಗಲಿರುಳು ಜಪಿಸುತಿದೆ
ನನಸೆನಿಸಿ ಸುಮವಾಗಿ, ಅರಳಿ ನಳನಳಿಸಿ ಘಮಿಸಿ
ಚಂದನದ ಸಿರಿ ಆವರಿಸಿ ಜಯಿಸಲಿ, ಕುಣಿಸಲಿ, ತಣಿಸಲಿ!

ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೨/೦೯/೧೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...