Monday, October 28, 2019

ಕವಿತೆ: ಈ ಜೀವನ

                  ಈ ಜೀವನ

ನಾವು ಎಣಿಸಿದಂತೆ ವಯಸ್ಸು, ಜೀವ ಭಾವದ ಸೊಗಸು!
ನಾವು ನಡೆಸಿದಂತೆ ಬದುಕು, ನೋವು ನಲಿವಿನ ಬಳಸು!

ಬಾಳಿನ ಹಾದಿಯಲ್ಲಿ ಬಿದ್ದಿವೆ ಎಷ್ಟು ಗುಂಡಿ?!
ಎಣಿಕೆ ಸಾಕು ಗೆಳೆಯ, ಇದ್ದದ್ದೆ ಗಂಡಾಗುಂಡಿ!
ನಡೆದಾಡಲಿನಿತು ಜಾಗ, ಸಾಕಲ್ಲೆ ನಡೆಯೆ ಹಾದಿ!
ನೆನಪಲ್ಲಿ ಇನಿತು ರಂಗು, ಕಂಡಲ್ಲೆ ಕನಸಿನಾದಿ!

ಜೀವನ ಸಾಗುವಲ್ಲಿ, ತಟವೆಲ್ಲಿ ಎನಿತು ದೂರ?
ಹುಡುಕು ಸಾಕು ಗೆಳತಿ,‌ ಇದ್ದಾನೆ ಸೂತ್ರಧಾರ!
ಮೇಲೇಳಲಿನಿತು ಕಸುವು, ಈಸುತ್ತ ಹೋಗೆ ತೀರ!
ಹೊಂಗನಸಿಗಿನಿತು ಹರಿವು, ದೊರೆತಲ್ಲೆ ಸುಖದ ಪೂರ!

ಬದುಕಿನ ಪಯಣದಲ್ಲಿ, ಉಂಟಿಲ್ಲಿ ಎಷ್ಟು ಬಳಗ?
ಗಣತಿ ಸಾಕು ಮನುಜ, ಉಳಿದದ್ದೆ ಬಂಧುಬಳಗ!
ಹಗುರಾಗಲಿನಿತು ಒಲವು,
ಮೆರೆದಲ್ಲಿ ಪ್ರೀತಿ ಮಧುರ!
ಹೊಂಬಾಳಿಗಿನಿತು ಮೆರುಗು, ಕಂಡಲ್ಲೆ ಸ್ನೇಹ ಅಮರ!

ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೧೬/೧೦/೨೦೧೯

ಪ್ರೇರಣೆ: ಗೆಳತಿ ರಶ್ಮಿಯ ಹುಟ್ಟುಹಬ್ಬದ ದಿನದಂದು, ಗೀತಳಿಗೆ ದಿನದ ವಿ ೇಷ ಕುರಿತು ನುಡಿದ ಮಾತು (Feeling younger day by day) ಬಹುವಾಗಿ ಕಾಡಿತು. ಇಸ್ತಾನಬುಲ್ ವಿಮಾನ ನಿಲ್ದಾಣದಲ್ಲಿ ರಚನೆಯಾದ ಕವಿತೆ.

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...