Saturday, December 14, 2019

ಕವಿತೆ: ಜೀವಗೀತೆ


                        ಜೀವಗೀತೆ

ಬದುಕು ಭಾವದ ತೋಟ ಮನಸಿನಾಳಕ್ಕಿಳಿದು
ನಿತ್ಯ ಕಾಡುತ ಮಥಿಸಿ ಹೊಮ್ಮುತಿದೆ ಜೀವಗೀತೆ

ಬಾನಿಂದ ಬುವಿಗಿಳಿದು ಬಾನಾಡಿಯಂತಾಗಿ
ಮನವಕ್ಕಿ ಹಾರಾಡಿ, ಇರದೆಲ್ಲೆ ನಲಿದಾಡಿ
ಬೆಳೆಯುತ್ತ ಬಾಳುತ್ತ ನಗೆಯೊಲ್ಮೆ ಚೆಲ್ಲಾಡಿ
ಸಂತಸದಿ ಸಂಭ್ರಮದಿ ಸೌಂದರ್ಯ ಧಣಿಯಾದ

ಬೆಳೆಬೆಳೆದು ಬಳಗದಲಿ ಒಡನಾಟ, ಕೆಳೆಕೂಟ
ಜೊತೆಜೊತೆಯ ಪಯಣದಲಿ ಸತ್ಯಮುಖ, ನಿತ್ಯಸುಖ
ಸಾಗುತ್ತ ಬೆಳಗುತ್ತ ಗಮ್ಮತ್ತು ಬೀರುತ್ತ
ಉಲ್ಲಾಸ ಉತ್ಸಾಹ ಚೈತನ್ಯ ಗಣಿಯಾದ

ಯಾನದಲಿ ತಿರುವುಗಳು ಕಲ್ಪಿಸದ ಕವಲುಗಳು
ತಲೆತೂರಿ, ಬಳಿಸೆಳೆದು, ನವಬಂಧ ಬೆಸುಗೆಗಳು
ಹೊಸ ಭೂಮಿ, ಹೊಸ ಬಾನು, ಎಂಬಂತೆ ತೋರುತ್ತ
ಆಶ್ಚರ್ಯ, ಕೌತುಕದ ನವಜೀವ ಚಿತ್ತಾರ

ನಂಬಿಕೆಯ ಮಗ್ಗುಲಲಿ, ಅಪ್ಪುಗೆಯ ಹಿಗ್ಗಿನಲಿ
ಭಯದಲ್ಲಿ, ಭಕ್ತಿಯಲಿ ನಡೆಯುತ್ತ, ಓಡುತ್ತ
ಎಡವಿದೆಡೆ ಸಂಬಳಿಸಿ ಈಸುತ್ತ, ಹಾರುತ್ತ
ಹೊಸಹುಟ್ಟು ಕಾಣುತ್ತ, ಜೀವಸೆಲೆ ಹುಡುಕಾಟ

ಶೃಂಗಾರ ಚೈತ್ರದಲಿ, ಅಂಗಾರ ತೋರುತಲಿ
ತಿಳಿಬಾನು ಮಸುಕಾಗಿ, ಕಾರ್ಮೋಡ ಘನವಾಗಿ
ಸ್ವಚ್ಚಂದ ಕನಸಾಗಿ, ತಹಬಂದು ಬಿಗಿಯಾಗಿ
ದಿಗ್ಭ್ರಮೆ, ದೃಷ್ಟಾಂತ ದೈವಗತಿ ಅನುಭೂತಿ

ಚೀತ್ಕಾರ, ಹೂಂಕಾರ, ಹೃದ್ಘೋಷ ಬರಸಿಡಿಲು
ಬಿರುಗಾಳಿ ಆರ್ಭಟಕೆ ತಿರುತಿರುಗಿ ಬಿಸುಸುಯ್ದು
ಹೂಮಳೆಯು ಧರೆಗಿಳಿದು ಶಾಂತಿಯಲಿ ಮಿಂದೆದ್ದು
ಹಚ್ಚೆದೆಯು, ದಿಟ್ಟೆದೆಯು ಸಂಜನಿಸಿ ಅಂಕುರಿಪ

ಹೊಸ ವರುಷ, ಹೊಸ ಹರುಷ, ಹೊಂಗನಸು ಸವಿನೆನಪು
ಗಿರಿಮಲ್ಲೆ, ಕಸ್ತೂರಿ, ನರುಗಂಪು ಮತ್ತೊಮ್ಮೆ
ದನಿದನಿಯು ಇನಿದನಿಯು, ನಗೆಹನಿಯು, ಸುಧೆಸವಿಯು
ಕಲ್ಪಿಸುತ, ನೆಚ್ಚಿಸುತ, ಒಪ್ಪಿಸುತ ರಕ್ಷಿ ಹರಸೆನುತ!


ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೧೧/೧/೨೦೧೫

ಪ್ರೇರಣೆ: ೨೦೧೫ರ ಆಗಮನದಲ್ಲಿ ಹೊಸ ಆಸೆ ಹೊತ್ತು ಬರೆದ ಕವನ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...