Tuesday, January 7, 2020

ಕವಿತೆ: ಮರಳಿದ ಮೈತ್ರಿಗೆ

ಮಿತ್ರ ಪೃಥ್ವಿಯೊಡನೆ ಇಂದು ಮಾತಾಡಿದ್ದು ಬಹಳ ಸಂತೋಷವಾಯಿತು. ಅವನ ಕನಸಿನ ಹಾದಿಯಲ್ಲಿ ಅವನು ಮಾಡಿರುವ ಪ್ರಗತಿಯ ಬಗ್ಗೆ ಬಹಳ ಹೆಮ್ಮೆ ಆಗುತ್ತದೆ. ಅಭಿನಂದನೆಗಳು🤝🏻

ಈ ಸವಿಕ್ಷಣದ ಪ್ರೇರಣೆಯಿಂದ ಮೂಡಿದ ಕವಿತೆ ----

ಮರಳಿದ ಮೈತ್ರಿಗೆ!

ನೂತನ‌ ವರ್ಷದ ಸ್ವಾಗತ ಕೋರುತ, ಸಾಗಿರೆ ಸ್ನೇಹದ ಕರೆಯೋಲೆ!
ಅಗಲಿದ ನೆಚ್ಚಿನ ಕೆಳೆಯನ ಕಲೆಯಲು ಆಯಿತು ಇದುವೆ ಶುಭವೇಳೆ!

ಓದಿನ ಮುಂದಿನ ಜೀವನ ಯಾನ, ಒಯ್ದಿತು ಎಲ್ಲರ ಎಲ್ಲೆಲ್ಲೋ!
ಹೊಸಹೊಸ ನಂಟು, ಜೊತೆಗಿನ  ಗಂಟು ತೋರಿತು ತಿರುವು  ಏನೇನೊ!
ಎಲ್ಲಿರಲೇನು, ಹೇಗಿರಲೇನು, ನೆನಪವು ಕೆಲವು ಚಿರಹಸಿರು!
ಎಸರುವ ಬದುಕಲಿ ತಂಪನು ಎರೆಯುವ ನಂಟಿವೆ ಕೆಲವು ನಮ್ಮುಸಿರು!

ನೆನಪಿನ ಬೇರೆಡೆ ಚಿಗುರಲು ಕನಸು, ಹಿಗ್ಗುತ ಮನಸು ಈಗೆಲ್ಲೊ!
ಮರಳಿದ ಮೈತ್ರಿಗೆ ಹಬ್ಬುತೆ ಸೊಗಸು, ಉಬ್ಬಿದ ಕನಸು ಮತ್ತೆಲ್ಲೊ!
ಏನೆ ಇದ್ದರು, ಇಲ್ಲದೆ ಹೋದರು ಕಾಡುವುದಿಲ್ಲಿ ಕೆಲಹೆಸರು!
ಏಳುಬೀಳಿನ ಬದುಕಿನ ಈಸಿಗೆ ಅಂಬಿಗರಿವರೆ ಕಲಶಜರು!

ರಚನೆ - "ಸಂತ"
ತಾರೀಖು - ೦೧/೦೧/೨೦೨೦

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...