Saturday, March 6, 2021

ನೀಲಾಂಜನ

 ನಮ್ಮನಗಲಿದ ಹಿರಿಯ ಕವಿಚೇತನ ಎನ್.ಎಸ್.ಎಲ್ ಅವರ ಆತ್ಮಕ್ಕೆ ಶಾಂತಿ ಕೋರುತ...

ನೀಲಾಂಜನ


ವಿಧಿಯ ಆಟದ ಗರವು ಉರುಳಿರುವುದು

ಈಗಿವರದೀ ಕಡೆಯ ಮೆರವಣಿಗೆಯು

ಸುಗಮಗೀತದೊಳಿದ್ದ ಕವಿಸಮಯವು

ಇನ್ನು ಕಂಡೀತೆ ಆ  ನವ್ಯ ಬರವಣಿಗೆಯು !!


ಸದ್ದಿಲ್ಲದೇ ಬಿರಿದ ಕಾವ್ಯ ಕುಸುಮದ ರಾಶಿ

ಘಮಘಮಿಸಿ ಸಂಭ್ರಮಿಸಿ ಸುಖ ಸ್ಪರ್ಶವನು ಸೂಸಿ

ರಂಗಿನೋಕುಳಿ ಮೆರೆಸಿ, ಭಾವಗಂಗೆಯ ಹರಿಸಿ

ಅಂತರಂಗವ ಬೆಳಗಿ, ನಲಿಸಿ ಲಾಲಿಸಿ ತಣಿಸಿ


ಈಗಿವರದೀ ಕಡೆಯ ಮೆರವಣಿಗೆಯು !

ಇನ್ನು ಕಂಡೀತೆ ಆ ನವ್ಯ ಬರವಣಿಗೆಯು !!


ಪ್ರಕೃತಿಯ, ಮಡಿಲಿನಲಿ, ರಮ್ಯ ಬೃಂದಾವನದಿ

ಗೋಪಿ-ರಾಧೆಯ ಭಜಿಸಿ, ಯುಗಳ ಗೀತೆಯ ರಚಿಸಿ

ಮುರಳಿ ಗಾನವ ನುಡಿಸಿ, ರಾಗದೊಲವನು ಮೆರೆಸಿ,

ಜೋಗಿ ಧ್ಯಾನವ ಬೆಳೆಸಿ, ದಿವ್ಯ ಧಾಮವ ಸೃಜಿಸಿ


ಈಗಿವರದೀ ಕಡೆಯ ಮೆರವಣಿಗೆಯು !

ಇನ್ನು ಕಂಡೀತೆ ಆ ನವ್ಯ ಬರವಣಿಗೆಯು !!


ವಿರಳ ಸಂತನ ಜೀವ, ಸತತ ಸುಲಲಿತ ಭಾವ

ವಂದ್ಯ ಗುರುಜನ ರೀತಿ, ಭಕ್ತಿ ತುಂಬುವ ಪ್ರೀತಿ

ನಾಡು ನುಡಿಯೆನೆ ಮಿಡಿದು ವಿಮಲ ಶಾಂತಿಯ ತೀಡಿ

ಕಾವ್ಯ ನೀಲಾಂಜನದೆ ಮನದ ಜಗವನು ಬೆಳಗಿ


ಈಗಿವರದೀ ಕಡೆಯ ಮೆರವಣಿಗೆಯು

ಇನ್ನು ಕಂಡೀತೆ ಆ ನವ್ಯ ಬರವಣಿಗೆಯು !!!


ರಚನೆ: 'ಸಂತ' ಸ.ಗು ಸಂತೋಷ್

ತಾರೀಖು: ೦೬/೦೩/೨೦೨೧

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...