Sunday, July 25, 2021

ಕವನ: ಚಿತ್ರಾರಾಧಕ

ಆತ್ಮೀಯ ಗುರುದತ್ತನ ಛಾಯಾಗ್ರಹಣದ ಮೇಲಿರುವ ಅಪಾರ ಒಲವು, ಅದಕ್ಕಾಗಿ ನಡೆಸಿರುವ ಕೃಷಿ, ಪರಿಶ್ರಮ, ಮೂಡಿಸಿರುವ ಕೃತಿ, ಕಾಣುತಿಹ ಪ್ರಗತಿ ಎಲ್ಲದಕೆ ಮನಸೋತು, ನಿಬ್ಬೆರಗಾಗಿ, ಮೆಚ್ಚಿ, ಹರ್ಷಚಿತ್ತನಾಗಿ, ಹಾಗೆಯೆ ಲಲಿತಕಲೆಗಳ ಅವಿನಾಭಾವ ಸಂಬಂಧಗಳ ಕಂಡು, ಅನುಭವಿಸಿ ಸಂತಸದಿ ಮಿಂದು ಮೂಡಿದ ಕವನವಿದು...


*************************


ಚಿತ್ರಾರಾಧಕ!


ಚಿತ್ರೌಪಾಸನೆ, ಚಿತ್ರಗೀತೆಗೆ ಚಿತ್ರಭಾನು ಶ್ರೀ ಗುರುದತ್ತ!

ಚಿತ್ರಶಿಲ್ಪದ, ಚಿತ್ರಲೋಕದ ಚಿತ್ರಶಾಲೆಗೆ ಸದಾ ವಸಂತ!

||೧||

ಛಾಯಾಗ್ರಹಣದ ಸ್ತುತ್ಯಾರಾಧನೆ ನಿತ್ಯ ನಡೆಸಿಹ ಪೂಜಾರಿ!

ಸೃಷ್ಟಿಲೀಲೆಯ ಮೆಯ್ಮೆಯ ಹರವನು ತಿಳಿಸುವ ತವಸಿ, ಅಲೆಮಾರಿ

ಹೃನ್ಮನ ನಲಿಸುವ ರಮ್ಯ ನಿಸರ್ಗದ ವಿಸ್ಮಯ ಲೋಕದ ಸಂಚಾರಿ!

ದಿವ್ಯ ದಿಟ್ಟಿಯೊಳು ಭವ್ಯ ಸೃಷ್ಟಿಯನು ಚಿತ್ರಿಸಿ ತೋರುವ  ಸುವಿಹಾರಿ! 

||೧||


||೨||

ಬಣ್ಣದ ಬದುಕಿನ ವರ್ಣ ರಂಜಿತ ಚಿತ್ರ ಪ್ರಪಂಚದ ಹರಿಕಾರ

ಜೀವವಿಲಾಸದ, ಭಾವವಿಕಾಸದ ಹೆಜ್ಜೆಯ ಗುರುತಿಗೆ ಜೊತೆಗಾರ

ಜೀವನ ಜಾತ್ರೆಯ ಮಧುರ ನೆನಪುಗಳ ಸುಂದರ ಮಾಲೆಯ ನೇಕಾರ

ಕಾಣದ ಲೋಕದ ಕಲ್ಪನೆ, ಕನಸಿಗೆ ಸೇತುವೆ ಕಟ್ಟುವ ಗೆಣೆಕಾರ

||೨||


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೨೩/೦೫/೨೧

ಪ್ರೇರಣೆ:

World Bio Diversity day ಅಂಗವಾಗಿ ನಾನು ತೆಗೆದ ಚಿತ್ರ Canon India ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದೆ. 

ಕೊನೆಯ ಡಾಲ್ಫಿನ್ ಚಿತ್ರ ನಾನು ಗೋವಾದಲ್ಲಿ ತೆಗೆದದ್ದು.


https://www.instagram.com/p/CPKXG_fBmsB/?utm_medium=share_sheet

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...