Sunday, April 30, 2023

ಕವಿತೆ: ಗೌಣಗಾನ

 ಮಗಳ ಮೇಲೆ ಕೈ ಮಾಡಿದ ಅಪ್ಪನ ಮನಸಿನಲ್ಲಿ ಉಂಟಾಗುವ ಕೋಲಾಹಲ, ಕಸಿವಿಸಿ, ತಳಮಳ ಎಲ್ಲಾ ತಂದೆಯರಿಗೂ ಅರಿವಾಗುವುದು. 

ಇಂಥದೊಂದು ವಿಷಘಳಿಗೆ ಘಟಿಸಿಹೋದ ದಿನವದು. 


ಮಗಳು ನನ್ನ ತಾಳ್ಮೆಯ ಮಿತಿಯನ್ನು ಪರೀಕ್ಷಿಸುತ್ತ ಬಂದಿರುವುದು ಹೊಸದಲ್ಲ, ನಾನು ಅದನ್ನು ಸಮರ್ಥವಾಗಿ ನಿಭಾಯಿಸಿರುವುದು ಹೊಸದಲ್ಲ... ಆದರೆ ಅಂದು ಮಾತ್ರ ಅದೇನೊ ಎಲ್ಲವೂ ಮಿತಿಮೀರಿ ಹೋಯಿತು. ಕೋಪ ನೆತ್ತಿಗೇರಿತ್ತು, ಮಾತನ್ನು ಹಿಂದಿಕ್ಕಿ ಕೈ ಮೊದಲಾಗಿತ್ತು.


ನನ್ನ ಮನಸ್ಸಿನಲ್ಲಿ ಇನ್ನಿಲ್ಲದ ಬೇಸರ, ಅಸಮಾಧಾನ ಅಂತರಂಗವನ್ನು ಸುಡುತಿತ್ತು. ಮನೆಯಿಂದ ಆಚೆ ನಡೆದು ಫಾಲ್ಗುಣದ ಇರುಳಿನ ಗಾಳಿಗೆ ಮೈಯೊಡ್ಡಿದೆ. ಹೊರಗೆ ತಂಪಿತ್ತೊ ಇಲ್ಲವೋ ನಡೆಯುತ್ತಿದ್ದೆ, ಮನಸು ಮಾತ್ರ ವಿಹ್ವಲಗೊಂಡಿತ್ತು.


ಬದುಕಿನ ತುಂಬ ಹಾಸು ಹೊಕ್ಕಿರುವ ವಿಡಂಬನೆ, ಸಂಬಂಧಗಳನ್ನು ಗೌರವಿಸಿ ಕ್ರಮಿಸಿದ ಬದುಕು ನೀಡಿದ ಬಳುವಳಿ, ಏಳು ಬೀಳಿನ ಅಲೆಮಾರಿ ಜೀವನ, ಸಂಕೀರ್ಣ ಭಾವಗಳೆಲ್ಲ ಒಮ್ಮೆಗೆ ಆವರಿಸಿದವು.

ಕವಿಮನಸು ಸಹಜವಾಗಿ ಇದೆಲ್ಲವನ್ನೂ ಒಮ್ಮೆಲೆ ಮತ್ತಾವುದರ ಜೊತೆಗೊ ಕೂಡಿಸಿ, ಜೋಡಿಸಿ ಕಾವ್ಯವಾಗಿಸಲು ಅನುವಾಯ್ತು.



ಬುದ್ದಿ ಹೇಳುವ ಮಂದಿಯೆ ನೋಡಿ ಊರಲ್ಲೆಲ್ಲ

ಕಿವಿಗೊಟ್ಟು ಕೇಳುವವರು ಈಗಿಲ್ಲಾರೂ ಇಲ್ಲ!

ಮೂಗಿನ ನೇರಕೆ ಮಾತಾಡುವರೆ ಸುತ್ತಲೂ ಎಲ್ಲ

ಮಿಡಿವ ಮನಸೆನೆ ಅವರಿಗೆ ಅಷ್ಟೆ ಮತ್ತಾರಿಗೂ ಇಲ್ಲ!


ಬಯಸಿದ್ದು ಸಿಗದಿರಲು, ಎಣಿಸಿದ್ದು ಇರದಿರಲು

ಹಿಡಿಹಿಡಿ ಶಾಪ ಹಾಕುವ ಗುಂಪಿಗೆ ಕಡಿಮೆಯಿಲ್ಲ  

ಕೇಳಿದ್ದು ದೊರೆಯದಿರೆ, ಹೇಳಿದ್ದು ನಡೆಯದಿರೆ

ಸಿಡಿಮಿಡಿಗೊಂಡಳುತ ಅಳಿಸುವರ ಕೊರತೆಯಿಲ್ಲ


ಕರ್ತವ್ಯಗಳ ಕೋಳ, ಋಣಭಾರದ ಶೂಲ

ಸಂಬಂಧಗಳ ಮೋಹ ಚಕ್ರವ್ಯೂಹದ ಜಾಲ!

ನಿತ್ಯ ಇರಿತಕೆ ಸಿಲುಕಿ ಶೂನ್ಯವೆಲ್ಲ, ಶಾಂತಿ ನೆಮ್ಮದಿ ಸಹನೆ ಗಾಳಿಗೆಲ್ಲ!


ಮಧ್ಯ ವಯಸಿನ‌ ಜನರ ಬೇಕು ಬೇಡಗಳಿಗೆ ಮೌಲ್ಯವಿಲ್ಲ

ನೆನ್ನೆ ನಾಳೆಗಳ ಸುತ್ತ, ಸತ್ತ ಇಂದಿನ ಬದುಕು ಗೌಣವಲ್ಲ!

ನೆನ್ನೆ ಬಾಳಿದ ಜೀವ, ನಾಳೆ ಬಾಳುವ ಜೀವ 

ಇಂದಿನುಸಿರನು ಏಕೊ ಸಹಿಸದಲ್ಲ !!


ರಚನೆ: ಸಂತ (ಸ.ಗು ಸಂತೋಷ್)

ತಾರೀಖು: ೦೬/೦೩/೨೦೨೩

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...