*ಉಳಿದ ಮಾತು!!*
ಮೌನ ಮಾತಾಗದೆ ತೆರೆಮರೆಗೆ ಸರಿದು
ಉಳಿದ ಮಾತುಗಳ ಲೆಕ್ಕ ಸಿಗಬಹುದೆ?
ಮಾತು ಮಿತವಾಗಿ ಮನದಲ್ಲಿ ಹುಗಿದು
ತುಳಿದ ಮಾತುಗಳು ಎನಿತು ತಿಳಿಬಹುದೆ?
ಪ್ರೀತಿ ಹಿತವಾಗಿ ಹೃದಯ ಮಿಡಿದ
ಸ್ನೇಹ ಮುದನೀಡಿ ಮನದಿ ಕುಣಿದ
ಕಾಡಿ ಏಕಾಂತ, ವಿರಹ ಬರೆದ
ನಾಚಿ ಕೆಂಪಾಗಿ, ಒಲವು ತೆರೆದ ||೧||
ನೊಂದು ಬಿಸುಸುಯ್ದು ಅವಡು ಬಿಗಿದ
ಅಳಲು ಮಡುಗಟ್ಟಿ ದಣಿದು ತಡೆದ
ಗಾಳಿ ಬೀಸಿನಲಿ ತೇಲಿ ಸಿಗದ
ಅಲೆಯ ಮೊರೆತದಲಿ ಕರಗಿ ಕಳೆದ
||೨||
ಸೃಷ್ಟಿ ಅಚ್ಚರಿಗೆ ಮಣಿದು ಮರೆತ
ಕನಸು ನೆನಪಿನಲಿ ಜಿಗಿದು ಕುಳಿತ
ಕುಂಚ ಕುಣಿದಾಡಿ ರಂಗು ಮೆರೆದ
ಗೀಚಿ ಪದವಾಗಿ ಗೀತೆ ಉಲಿದ
||೩||
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೨೧/೦೪/೨೪
ಪ್ರೇರಣೆ:
ಆತ್ಮೀಯ ವಿನುತಾಳ ರಚನೆ 'ಉಳಿದ ಮಾತುಗಳು'
ಕವಿತೆ:
ನಿನಗೆ ಹೇಳುವ ಮಾತುಗಳು
ಇಂದು ಕವಿತೆಯ ಸಾಲುಗಳು .....
ತುಟಿಯ ಮೇಲಿನ ಪದಗಳು
ತುಂಬಿವೆ ಬಿಳಿಯ ಹಾಳೆಗಳು.....
ಅಡಗಿ ಕುಳಿತ ನೆನಪುಗಳು
ಬಂದಿವೆ ಬರೆಯಲು ಕಥೆಗಳು....
ಪ್ರೀತಿಗೆ ಮೂಡಿದ ಭಾವನೆಗಳು
ಕಂಡಿವೆ ಪುಸ್ತಕದ ರಚನೆಗಳು
ನಾನೀಗ ಕುಳಿತರೆ ಬರೆಯಲು
ಸಂಗ್ರಹಿಸಲು ಬೇಕು ಗ್ರಂಥಾಲಯಗಳು..
- ವಿನುತ
https://www.instagram.com/reel/C56ueMcLNWx/?igsh=MTI3cDlvdGQybzg3OA==
No comments:
Post a Comment