Sunday, June 15, 2025

ಕವಿತೆ: ಕೈ ಆಟ

 ವಿನುತ, ನಿನ್ನ ಸಾಲುಗಳನ್ನು ಓದಿದಾಗ ಅನಿಸಿದ್ದು ಹೀಗೆ...😊


ವಿರಾಮ ಮುಗಿಸಿದ ಕವಯಿತ್ರಿ ತಾನು

ಲಗುಬಗೆಯಲ್ಲಿ ಲೇಖನಿಯ ಪಿಡಿದು

ಮನಸಿನಂಗಳದ ಕೈದೋಟದಲ್ಲಿ 

ವಿಹರಿಸುತ ಅರಳಿಸಿಹ ಭಾವಕುಸುಮವಿದು

...............


ನಿನ್ನ ಪರೀಕ್ಷೆ ಚೆನ್ನಾಗಿ ಆಯ್ತಮ್ಮ? ಮನಸು ಹಗುರಾಯ್ತ?


*******


ಜಗದಿ ನಡೆವ ಎಲ್ಲದರಲಿ ಅವನದೆ ಕೈ ಮುಂದೆ

ದೈವ ಲೀಲೆಯಲಿ ನಾವು ಮಾತ್ರ ಕೈಗೊಂಬೆ


ಕೈ ಹಿಡಿದು ನಡೆಸುವವರು, 

ಕೈ ಬಿಟ್ಟು ಸರಿಯುವವರು

ಕೈಯಿಟ್ಟು ಹರಸುವವರು, 

ಕೈಮಾಡಿ ಥಳಿಸುವವರು


ಇಲ್ಲಿ ಎಲ್ಲವೂ ಕೈ ಮಾಯೆ!

ಕೆಲ ಮುಂದೆ ಕೆಲ ಹಿಂದೆ

ಅರಿಕೆ ಮಾತ್ರವದೊಂದೆ, ಎಲ್ಲರ ಕಾಪಿಡು ಜಗದಾಂಬೆ!


ಕೈಗೂಡಿ ಹಣಿಸುವವರು, 

ಕೈಯಲ್ಲಿ ಕುಣಿಸುವವರು

ಕೈನೀಡಿ ಮಿಡಿಯುವವರು

ಕೈತೀಡಿ ಕೆಣಕುವವರು


ಇಲ್ಲಿ ಎಲ್ಲವೂ ಕೈ ಮಾಯೆ! ಕೆಲ ಮುಂದೆ ಕೆಲ ಹಿಂದೆ

ಅರಿಕೆ ಮಾತ್ರವದೊಂದೆ, ಎಲ್ಲರ ಕಾಪಿಡು ಜಗದಾಂಬೆ!


ಕೈ ಚಾಚಿ ಬೇಡುವವರು, 

ಕೈ ತುಂಬ ನೀಡುವವರು

ಕೈಕಟ್ಟಿ ನಿಲ್ಲುವವರು, ಕೈಕೊಟ್ಟು ಓಡುವವರು


ಇಲ್ಲಿ ಎಲ್ಲವೂ ಕೈ ಮಾಯೆ! ಕೆಲ ಮುಂದೆ ಕೆಲ ಹಿಂದೆ

ಅರಿಕೆ ಮಾತ್ರವದೊಂದೆ, ಎಲ್ಲರ ಕಾಪಿಡು ಜಗದಾಂಬೆ!


ರಚನೆ: ಸಂತ (ಸ.ಗು ಸಂತೋಷ್)

ತಾರೀಖು: ೧೯/೦೨/೨೦೨೫


ಪ್ರೇರಣೆ:




ಹಳ್ಳಿಯ ಕೈ ಕೆಸರಲ್ಲಿ ದುಡಿದರೆ

ಪಟ್ಟಣದ ಕೈ ಕಚೇರಿಯಲ್ಲಿ !


ಹಳ್ಳಿಯ ಕೈ ಅಲ್ಲಿ ಕಾಣುವ ಕೆಸರು 

ಪಟ್ಟಣದ ಕೈ ಅಲ್ಲಿ ಕಾಣದ ಕೆಸರು 

ಆದರೆ ಎರಡು ದುಡಿಯುವ ಕೈಗಳೆ !


ಅಪ್ಪನ ಕೈ ಹೊರಗೆ ದುಡಿದರೆ

ಹೆತ್ತವಳ ಕೈ ಮನೆಯಲ್ಲಿ !


ಅಪ್ಪನ ದುಡಿಮೆಗೆ ಸಂಬಳ

ಅಮ್ಮಳ ದುಡಿಮೆಗೆ ಪ್ರೀತಿ 

ಇಬ್ಬರು ಸಂಸಾರಕ್ಕೆ ದುಡಿದವರೆ !


ಗಡಿಯಾಚೆ ಯುದ್ಧನ ಕೈ ಕಾವಲು

ಆರೋಗ್ಯಕ್ಕೆ ವೈದ್ಯರ ಕೈ ಗುಣ

ವಿದ್ಯೆಗೆ ಗುರುವಿನ ಕೈ ಪಾಠ

ಇನ್ನು ಅದೆಷ್ಟೋ ಕೈಗಳು ದೇಶದ ಅಬ್ಬಿವೃದ್ದೆಗೆ ದುಡಿದಿವೆ !


ದುಡಿಮೆಯೇ  ದೇವರು ಎಂದು

ಅಂದು ನಮ್ಮ ಹೆತ್ತವರು ,ಇಂದು ನಾವು

ಮುಂದೆ ನಮ್ಮ ಮಕ್ಕಳು ದುಡಿಯಲೇ ಬೇಕು !

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...