ನಮ್ಮೂರ ಅರ್ಚಕರು
ನಮ್ಮೂರ ಅರ್ಚಕರು
ನಮ್ಮೂರ ಅರ್ಚಕರು ಮುಂಜಾನೆ ಎದ್ದವರು,
ಹೊರಡುವರು ನದಿಯೆಡೆಗೆ, ತಾಯಿ ತುಂಗೆಯ ಬಳಿಗೆ
ಬರಿಗಾಲಿನ ಪಯಣ, ಇಲ್ಲ ಕಲ್ಲು-ಮುಳ್ಳಿನ ಗಮನ
ಮಂಜು ಮುಸುಕಿದ ಹಗಲು, ಲೆಕ್ಕಿಸದು ಆ ತನುವು
ಮಳೆ ಚಳಿ ಎನ್ನದೆಯೆ ಎಂದಿನಂತೆ ನಡೆಯುವರು.
ತಾಯಿ ತುಂಗೆಗೆ ನಮಿಸಿ ಮುಳುಗನ್ನು ಹಾಕುವರು
ಸೂರ್ಯ ದೇವನಿಗರ್ಘ್ಯ ಮರೆಯದೆ ನೀಡುವರು
ಮಡಿಬಟ್ಟೆಯ ತೊಟ್ಟು ಸರಸರನೆ ಹೊರಡುವರು
ಊರ ಗುಡಿಯೆಡೆಗೆ, ರಂಗನಾಥನಿರುವೆಡೆಗೆ.
ದಾರಿಯಲಿ ಹೂದೋಟ ಕೈಬೀಸಿ ಕರೆದಾಗ
ದೈವ ಸನ್ನಿಧಿಗೆಮ್ಮ ಕೊಂಡೊಯ್ಯಿರೆಂದಾಗ
ಜಾಜಿ,ಮಲ್ಲಿಗೆ,ತುಳಸಿ,ಸಂಪಿಗೆಯ ಒಯ್ಯುವರು
ಸುಪ್ರಸನ್ನತೆಯನ್ನು ಮೊಗದಲಿ ತೋರುವರು
ಗುಡಿಗೋಪುರ ಕಂಡ ಅನುಕ್ಷಣವೆ ನಮಿಸುವರು
ಭವ್ಯದ್ವಾರವ ತೆರೆದು ಭಜಿಸುತ ನಡೆಯುವರು
ರಂಗನಾಥನ ಅಂದ ಚಂದವನು ಕಂಡವರು
ಎಂದಿನಂತೆ ಹಿಗ್ಗುವರು, ಕೈಮುಗಿದು ನಿಲ್ಲುವರು.
ಮೂರುತಿಗೆ ಮಜ್ಜನವ ಅನುದಿನ ನಡೆಸುವರು
ಪತ್ರಪುಷ್ಪದಿ ಅವರು ಶೃಂಗಾರ ಮಾಡುವರು
ದಿವ್ಯಭಕ್ತಿಯ ತಳೆದು ಮೈಮರೆತು ಪಾಡುವರು
ಅವನ ಸನ್ನಿಧಿಯಲ್ಲಿ ಸ್ವರ್ಗವನೆ ಕಾಣುವರು!
ರಚನೆ: ’ಸಂತ’ (ಸ.ಗು.ಸಂತೋಷ್)
ತಾರೀಖು: ೧೧/೧೧/೨೦೦೦
ಪ್ರೇರಣೆ:
ನಮ್ಮೂರು ಸಖರಾಯಪಟ್ಟಣದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಸುತ್ತ ಒಂದು ಕಲ್ಪನೆ
No comments:
Post a Comment