Monday, September 21, 2015

ಕವಿತೆ: 'ಸಂತ'

ಜೀವನದಲ್ಲಿ ಅದೆಷ್ಟೋ ಜನರ ಅನುಭವ ಹೀಗೆಯೆ - ಬಯಸುವುದು ಒಂದು, ಆ ವಿಧಿ ನಡೆಸುವುದು ಮತ್ತೊಂದು! ನನ್ನ ಅನುಭವವು ಇದಕ್ಕೆ ಹೊರತಾದುದೇನಲ್ಲ... ಈಗಿನ ಜೀವನಕ್ಕೆ ತನ್ನದೆ ಆದ ಮೆರುಗು, ಹೆಸರು ಇರಬಹುದು, ಇದೆ ನಿಜ. ಮನಸಿನಾಳದ ಆ ಕನಸಿನಂಗಳದ ಮೆರುಗನ್ನು ಮತ್ತಾವ ಸೊಗಸು ಮೀರಿಸಲಾರದು. ಅದರ ಭಾವಾಭಿವ್ಯಕ್ತಿ ಈ ಕವನ! ಇದು ವೈಯಕ್ತಿಕ ಜೀವನದ ಪ್ರತಿಬಿಂಬವಲ್ಲ, ಆದರೆ ಅದರ ಒಂದು ತುಣುಕು ಖಂಡಿತ ಇದೆ! 
ಎನ್ಎಸ್.ಎಲ್ ಅವರ ಶರೀಫಜ್ಜನ ಮರೆಯಲಾಗದ ಕವಿತೆ, ಅದಕ್ಕೆ ಮೈಸೂರು ಅನಂತಸ್ವಾಮಿಯವರ ಅಮೋಘವಾದ ರಾಗಸಂಯೋಜನೆ, ಮಂತ್ರಮುಗ್ದರಾಗಿಸುವ ರಾಜು ಅನಂತಸ್ವಾಮಿಯವರ ಗಾಯನ ಎಲ್ಲವೂ ಮನತುಂಬಿ ಈ ಸಾಲುಗಳನ್ನು ಬರೆಯಲು ಪ್ರೇರಣೆ ನೀಡಿದವು.

ಸಂತ

ಭೋಗ ಬರ್ಬರ ಬಿಟ್ಟು, ಜ್ಞಾನ ದೀಕ್ಷೆಯ ತೊಟ್ಟು, ಒಲವು-ಗೆಲವಲ್ಲಿ ಬಾಳಿದಾತ
ಒಂದು ಕರ್ಮವ ಬಯಸಿ, ಮುಂದೊಂದಕೆ ಸವೆಸಿ, ಕರ್ಮಸಂಕಟದಲ್ಲಿ ನರಳಿದಾತ
ನೂರು ಕನಸನು ಕಟ್ಟಿ, ಎಲ್ಲ ಮುಗಿಲನು ಮುಟ್ಟಿ, ಕೊನೆಗೆಲ್ಲ ಬಾನಲ್ಲಿ ಕದಡಿದಾತ
ಇಲ್ಲೇ ನೆಲೆಸಿಹನಾತ, ನಡೆಸುತ್ತ ದಿನ ಜೀತ, ನೆನೆಯುತ್ತ ಲೋಕದ ಮೇರೆಗಳನು, ಬೆಳಗುತ್ತ ಭಾವದ ದೀಪಗಳನು!

ವಿಧಿಯು ತೋರುತ್ತಿರುವ ಆಟಗಳಲಿ, ಬಾಳು ಕಲಿಸುತ್ತಿರುವ ಪಾಠಗಳಲಿ
ನವರಸದ ಹೊಸ ಹುಟ್ಟೆ, ಮನದಲ್ಲೆ ಪದವಿಟ್ಟೆ, ಕಾವ್ಯ ಕಾಣಿಸದೆ ನಿನ್ನ ಮತಗಳನ್ನು
ಏಕೆ ಹೇಳೊ ಸಂತ, ಅಗಲಿ ಕಬ್ಬಿಗ ಪಂತ!
ಹಿಡಿದದ್ದು ಸಲ್ಲದ ಕರ್ಮವನ್ನು, ಕಳೆದದ್ದು ಮನಸಿನ ಶರ್ಮವನ್ನು?!

ಏನು ಕನಸಿನ ಲೋಕ, ಏನು ಕಾಸಿನ ಲೋಕ, ಸತ್ಯ, ಮಿಥ್ಯ, ಪಥ್ಯ ತೂಗಿದವನು
ಜೀವ ಜೀವದಿ ಕಲೆತು, ಭಾವ ಭಾವದಿ ಬೆರೆತು, ನೇಹ ಪ್ರೇಮದ ಚರಿತ ಕೂಡಿದವನು
ಹೇಳು ಹೇಳು ಸಂತ, ಮೌನವೇತಕೊ ಇಂತ?!
ನಗೆ ನಲುಮೆ ತುಂಬುತ್ತ ಬಾಳಿದವನು, ಹಗೆ ಹೊರೆಯ ಮರೆಸುತ್ತ ಆಳಿದವನು!

ಮನಸು ಮನಸನು ಮುಟ್ಟಿ, ಕವನ ಕವನವ ಕಟ್ಟಿ, ಭಾವಲೋಕದ ಸೃಷ್ಟಿ ಮಾಡಿಬಿಟ್ಟೆ
ನಾಡು ನುಡಿಯೆನೆ ಬಾಳು, ಅನ್ಯವೆನ್ನಲೆ ಹಾಳು, ಮರ್ತ್ಯಲೋಕದ ಸತ್ಯ ಸಾರಿಬಿಟ್ಟೆ
ಎದೆ ಮೀಟಿ, ಪದ ತೂರಿ, ಜನಮನದ ನಭವೇರಿ, ಇಳೆಯ ಹೆಮ್ಮಳೆಗರೆದು ನೆನೆಸಿ ಬಿಟ್ಟೆ
ಹೇಳು ಹೇಳು ಸಂತ! ನಿನಗೇಕೆ ಈ ಅಂತ?!
ಮನದ ಪದವೆಲ್ಲ ಬೆಳಗುವ ದೀಪವಾಯ್ತು, ನಿನ್ನ ಬಾಳೆಲ್ಲ ಹಣತೆಯ ವರ್ತಿಯಾಯ್ತು!

ರಚನೆ: ’ಸಂತ’
ತಾರೀಖು: ೧೨/೦೬/೦೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...