ಅಮ್ಮನ ನೆರಳು
ಮೆಲ್ಲ ಮೆಲ್ಲನೆ ಎನ್ನ ಕೈಹಿಡಿದು ನೀನಿಡುತಲಿ ಹೆಜ್ಜೆ
ಕರೆದೊಯ್ಯುತಿಹೆ, ನನ್ನ ನೆನಪಿನಂಗಳಕೆ, ಕನಸಿನಾಗಸಕೆ!
ತೋರುತಿದೆ ಸಿರಿಗೆರೆಯು, ಹಿತವಾದ ತಂಪೆಲರು
ಜೊತೆಯಲ್ಲಿ ನನ್ನಮ್ಮ, ಸಂತಸದ ಹಸಿರುಸಿರು
ಅಬ್ಬಬ್ಬ! ಆಗದೇನು ಹಿಗ್ಗು! ಮೊಗವು ಘಮ್ಮನರಳಿದ ಮಲ್ಲಿಗೆಯ ಮೊಗ್ಗು!
ಎಲ್ಲೆಲ್ಲೂ ಸೊಗದ ಪರಿಮಳವಡರಿ, ಆಸೆ ಕನಸುಗಳು ರಂಗೇರಿ
ಬಾನಾಡಿಯಂತಂಬರಕೆ ಮುಕ್ತ ಎಳೆಮನ ಜಿಗಿದು ಹಾಡಿ ನಲಿಯುತ
ರೋಮಾಂಚನ! ಸಂಭ್ರಮ, ಸಡಗರ, ಹರ್ಷೋಲ್ಲಾಸ, ಹೂಮಳೆಯ ಸಿಂಚನ!
ಸೊಗಬೆರೆತು, ಜಗ ಮರೆತು, ಮೈಮರೆವು ಆವರಿಸಿ ಎಲ್ಲೋ ಜಾರಿದ ಮನಸು
ಥಟ್ಟನೆಚ್ಚರವಾಯ್ತು! ಎಡವಲಿದ್ದೆನ್ನ ಕೈಹಿಡಿದಿದ್ದಳು ಅಮ್ಮ...ಅಮ್ಮ...
ಬೆರಗು, ಭಯ, ವಿಸ್ಮಯಗಳೆರಗಿ ಅವಳಕ್ಕರೆಯ ಸ್ಪರ್ಶಕೆ ಮಿಂಚಿ ಕರಗಿದವು
ಮನಸು ಹಗುರಾಗಿ, ಮಮತೆ ಘನವಾಗಿ ಬೆಳಗಿತು "ಕರುಳ ಕುಡಿ" ಬಂಧನ!
ಅಮ್ಮನೊಂದಿನ ನೆನಪು, ಎನ್ನ ಯಾನಕೆ ಸ್ಪೂರ್ತಿ, ನಿತ್ಯ ಬೆಳಗುವ ದೀಪ್ತಿ
ಮನದಿ ಅರಳಿ ಘಮಿಪ ಪರಿಪರಿಯ ಕನಸು, ಅದರ ತುಂಬೆಲ್ಲ ನಿನ್ನದೆ ಸೊಗಸು
ಜೀವ ಪಯಣದಿ ಎಂದೂ ಜೊತೆಗಿರುತ, ನಡೆಸುವೆ ಕೈಹಿಡಿದು ನಿನ್ನ ಪ್ರತಿ ಹೆಜ್ಜೆ
ಸದಾ ನಲಿಯುತೆ ನೀನು, ಕಾಣಲನುಕ್ಷಣ ನಾನು, ಎನಗದುವೆ ಸಿಹಿ ಸಜ್ಜೆ!
ರಚನೆ - ಸ.ಗು.ಸಂತೋಷ್
ತಾರೀಖು - ೨೯/೦೧/೨೦೧೫
ಪ್ರೇರಣೆ: ತುಷಾರದ ಚಿತ್ರಕವನ ಸ್ಪರ್ಧೆ
No comments:
Post a Comment