Saturday, April 28, 2018

ಕವಿತೆ: ಪ್ರೀತಿ ಇಲ್ಲದ ಮೇಲೆ

  "ಪ್ರೀತಿ ಇಲ್ಲದ ಮೇಲೆ"

 ಪ್ರೀತಿ ಇಲ್ಲದ ಮೇಲೆ, ಆಮೇಲೆ, ಎಂದೆಲ್ಲ ಯೋಚಿಸುತ
ಭವ್ಯ ಕವಿತೆಯ ಭಾವದಾಳದಿ ಸಂಚರಿಸುತ
ಪುಟಿದ ಭಾವದ ಬುಗ್ಗೆ ಅಡರಿ, ಮಾರ್ದನಿಸುತ
ಸೃಜಿಸಿತು ಪ್ರೀತಿಯೊಳು ಹೊಸ ಕಾವ್ಯ ಸಂಭ್ರಮಿಸುತ 

 ಮೂಡಬೇಕು ಹತ್ತು ಹಲವು ಇಂತ ಸೊಗಸಾದ ಕವಿತೆ
ಅಪರೂಪದ ಮನಸು, ಸುಭಾವ ಬೆಳಗುವ ಹಣತೆ
ಸರಳ, ನಿರ್ಮಲ, ನಿರಾಳ, ನಿರ್ಲಿಪ್ತ, ಇನ್ನೆಲ್ಲಿಯ ಕೊರತೆ
ತಂತಾನೆ ಮೂಡುವುದು ಪ್ರೀತಿಗೆ ಅದ್ವಿತೀಯ ಘನತೆ

 ಚೋದ್ಯವೆನಿಪುದು ಪ್ರೀತಿ-ಸ್ನೇಹ-ಪ್ರೇಮಗಳ ಚರಿತೆ
ಆವ ಕಾಲಕು ಮಾಸದ, ಬತ್ತದ ಪನ್ನೀರಿನ ಒರತೆ
ವೈವಿಧ್ಯ, ಅಭೇದ್ಯ, ಅನನ್ಯ, ಸೃಷ್ಟಿ ತೋರುವ ಬಣ್ಣ
ಕವಿವಾಣಿ ಕಾಡುತಿದೆ ಇಂತಿರಲು "ಇದು ಬರಿ ಬೆಳಗಲ್ಲೊ ಅಣ್ಣ"

ರಚನೆ: "ಸಂತ" (ಸ.ಗು.ಸಂತೋಷ್)
ತಾರೀಖು - ೦೯/೦೫/೨೦೧೪

ಪ್ರೇರಣೆ: ೦೮/೦೫/೨೦೧೪ರಂದು ನನ್ನ ಆತ್ಮೀಯ ಮಿತ್ರ ವಿಜಯ್ ಕಳುಹಿಸಿದ  ಕವಯತ್ರಿ ಭವ್ಯ ಅವರ ಕೆಳಗಿನ ಕವಿತೆಯನ್ನು ಓದಿದಾಗ

ಪ್ರೀತಿ ಇಲ್ಲದ ಮೇಲೆ
ಒಲ್ಲದ ಮನಸ ಒಲಿಸುವುದೆಂತು
ಕಲಕಿದ ಉದಕವ ಕುಡಿಯುವುದೆಂತು
ಕಲ್ಲಿನ ಮೇಲೆ ಮಳೆ ಸುರಿದಂತೆ
ಇಲ್ಲದ ಪ್ರೀತಿಯಲಿದೆ ಬರಿ ಕೊರತೆ

ಪ್ರೀತಿ ಇಲ್ಲದ ಮೇಲೆ
ಮಳೆಯದು ಭುವಿಯನು ಅಪ್ಪುವುದೆಂತು
ಹುಲ್ಲದು ಹುಲ್ಲೆಯ ತಣಿಸುವುದೆಂತು
ಕಾಮನ ಬಿಲ್ಲಲಿ ಸೇರಿದ ಬಣ್ಣವು
ನೋಡುವ ಕಣ್ಣನು ಕುಣಿಸುವುದೆಂತು

ಪ್ರೀತಿಯೆ ಇಲ್ಲದ ಮೇಲೆ
ಬೆಳಕನು ಬೀರುವ ಕಿರಣದ ಕಂತೆ
ಗಾಳಿಗೆ ಒಯ್ಯಲು ಬೇಸರವಂತೆ
ಮಧುವನು ಹೊತ್ತಿಹ ಸುಮಗಳ ಸಂತೆ
ದುಂಬಿಯ ದೂರಕೆ ತಳ್ಳುವ ಚಿಂತೆ

ಆದರೂ ಪ್ರೀತಿಯಿಲ್ಲದ ಮೇಲೆ
ಹುಡುಕದಿರು ಒಲವಿರದ ಮನದಲ್ಲಿ ಮಮತೆ
ಅಳಿಸಿಬಿಡು ನೀ ಅತ್ತು ಬರೆದ  ಕವಿತೆ
ಹೊರಡುತಿರು ಕಾಲ ಕರೆದೆಡೆಗೆ ತೊರೆದೆಲ್ಲ ಜಡತೆ
ಹಿಂತಿರುಗಿ ನೋಡದಿರು ಪ್ರೀತಿಸುವೆ ತ್ತೆತ್ರ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...