"ತೃಷೆಯ ಉಷ್ಣ"
ನಮ್ಮ ನೋಟಕೆ ಇರಲೆಬೇಕು ನಮ್ಮದೆಂಬ ದೃಷ್ಟಿ ಪುಷ್ಟಿ!
ಎರವಲಾದೊಡೆ ಕಂಡುದೆಲ್ಲ ಅವರಿವರ ಸೃಷ್ಟಿ, ನಮ್ಮ ದೃಷ್ಟಿ!
ಮಾಧ್ಯಮದ ಪ್ರವರ, ವಾರ್ತೆ ಸಮರ, ಅರ್ಧಸತ್ಯದ ದರ್ಶನ
ಅಡಿಪಾಯ ಇಲ್ಲದೆ, ಆಧಾರ ಬೇಡದೆ ಗಾಳಿಗೋಪುರ ಕಟ್ಟುತ
ಅಧಿಪತ್ಯ ದಾಹಕೆ, ಅಧಿಕಾರ ಮೋಹಕೆ ಅನೃತದ ಕೂಪಕೆ ತಳ್ಳುತ
ದೂರ ದೂರಕೆ ಸತ್ಯವಗೋಚರ... ಮಸಕು ಮುಸುಕಿನ ದರ್ಶನ!!
ಆಧ್ಯಾತ್ಮ ಪ್ರವರ, ಚರ್ಚೆ ಮಧುರ,
ಮನದ ನೋಟದ ದರ್ಪಣ
ಅರಿವೆಲ್ಲೆ ಹೆಚ್ಚಿಸಿ, ಸರಿ ತಪ್ಪು ತೂಗಿಸಿ
ಭ್ರಾಂತಿ ಭ್ರಮಣೆ ಅಟ್ಟುತ...
ಮುಸುಕಲ್ಲಿ ಗುದ್ದದೆ , ಮಸಕಲ್ಲಿ ಒದೆಯದೆ, ಸನ್ಮತಿಯ ಸಂಯಮ ತೋರುತ
ಮೆಲ್ಲಮೆಲ್ಲನೆ ಸತ್ಯದಂಕುರ... ಜೀವ ಭಾವದ ದರ್ಪಣ!!
ವಾದ ಸಂವಾದ ಬೇಕು, ಬೇಡ ವ್ಯರ್ಥ ವಿವಾದವು!
ತರ್ಕ ಪ್ರತಿತರ್ಕ ಬೇಕು, ವಿತರ್ಕ ಸುಮ್ಮನೆ ಸಲ್ಲದು!
ಬೇಕು ಏನವು?! ಸಾಕು ಎಷ್ಟಕೆ?!
ಇದಕೇನು ಉತ್ತರ ಸಿಕ್ಕದು!
ಹೊಟ್ಟೆ, ಬಟ್ಟೆ, ಮಾಡು ಮೀರಿದ ತೃಷೆಯ ಉಷ್ಣ ನಮ್ಮದು!
ರಚನೆ - "ಸಂತ" (ಸ.ಗು.ಸಂತೋಷ)
ತಾರೀಖು-೨೧/೦೪/೨೦೧೮
ಪ್ರೇರಣೆ: ಇತ್ತೀಚಿನ ದಿನಗಳಲ್ಲಿ "WhatsApp" ಗುಂಪುಗಳಲ್ಲಿ ಹರಿದಾಡುವ ರಾಜಕೀಯದ ವಿಷಯವಾಗಿನ ಸಂದೇಶಗಳು, ಅವುಗಳ ಸುತ್ತಲಿನ ಬಿಸಿಬಿಸಿ ಚರ್ಚೆಗಳು
No comments:
Post a Comment