Thursday, June 14, 2018

ಕವಿತೆ: ಜೋಗುಳ

                     ಜೋಗುಳ

ಜೋಗುಳದ ಜೇನೆರೆವ ತಾಯಿಯ ಮಡಿಲಲ್ಲಿ
ಬೆಚ್ಚನೆಯ ಅಪ್ಪುಗೆಯ ಅಗ್ಗಳದ ಸುಖದಲ್ಲಿ
ಅರಳುತಲಿ ಮುಖ ಕಮಲ ಚಿಮ್ಮಿಸುತ ಆನಂದ
ಪವಡಿಸಿಹ ಹಸುಕಂದ, ನೋಡಲು ಬಲು ಚಂದ

ನಲಿದು ಎಳೆ ಹೂ ಮನಸು, ಬಿರಿದ ಮಲ್ಲಿಗೆ ಸೊಗಸು
ಎಲ್ಲೆಡೆಯು ನರುಗಂಪು, ಎಲ್ಲರೆದೆ ಮನ ತಂಪು
ಲವಲೇಶದ ಕ್ಲೇಶ ಇರದ ಧನ್ಯತೆ ಭಾವ
ನಿರ್ಮಲಾ, ಸುಶಾಂತ, ಹಗುರವಾಯಿತು ಜೀವ!

ಇಲ್ಲ ಸೋಗಿನ ಆಟ! ಬಾಳ ಎಗ್ಗಿನ ಓಟ!
ಬಡವ ಬಲ್ಲಿದ ಭೇದ ಎಲ್ಲ ಮೀರಿದ ಮಾಟ!
ಒಲವೆರೆದು, ಹಾಲುಣಿಸಿ, ತಂದಾನ ತಾನಾನ
ಸವಿರುಚಿಯ ಸಿಹಿಪಾಕ, ನವ್ಯ ವಿಸ್ಮಯ ಲೋಕ!

ಮೂಕ ವಿಸ್ಮಿತ ಎಲ್ಲ, ಬೆರಗು, ಮೆಚ್ಚುಗೆ, ಹೆಮ್ಮೆ
ಹೀಗಾಗುವುದು ಸಹಜ, ತೋರೆ ನಾಕ ಒಮ್ಮೊಮ್ಮೆ!
ಬೇಕೆನಿಸುವುದು ಆ ಸುಖವು ಬಾಳಲ್ಲಿ ಮತ್ತೊಮ್ಮೆ
ಯಾರು ಬಲ್ಲರು ಅದನು, ಲಭ್ಯವೇ ಇನ್ನೊಮ್ಮೆ?!

ರಚನೆ - ’ಸಂತ’ (ಸಖರಾಯಪಟ್ಟಣ)
ತಾರೀಖು - ೧೪/೦೭/೧೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...