Friday, June 15, 2018

ಕವಿತೆ: ಹಿಮಪಾತ

                      ಹಿಮಪಾತ

ಮನ ಮಂದಿರ, ಹೊಳೆ ತನು ಸುಂದರ, ಸಿರಿ ಜಗ ರಂಗಕೆ
ಬಾ ಹಿಮ ಮಣಿ ಮಳೆ ದರ್ಶನಕೆ
ಈ ಧರೆಗಿಳಿದಿಹ ನರ್ತನಕೆ!

ನೆಲ-ಜಲ-ಮಾಳಿಗೆ, ಅರ್ಜುನ ಚೆಲುವಲಿ
ಬೆಳ್ ಎಲರ್ ಸೊಗದಿಂ ಸುಳಿಸುಳಿಯೆ
ಕಾನನ ಭೂರುಹ ಮಿಂದಿವೆ ಬಿಳುಪಲಿ
ಬೆಳ್ ಮಳೆ ಮುಗಿಲಿಂದಿಳಿಯಿಳಿಯೆ
ವರ್ಣೇಂದ್ರಿಯಗಳ ಸಮ್ಮಿಲನ, ಪಂಚೇಂದ್ರಿಯದೊಳು ಕವಿ ಸದನ
ಕಲ್ಮಷ ಮಾರ್ಜನ, ಶಾಂತಿಯ ಲಾಂಛನ, ಹಂಬಿದೆ ಧವಳದ ಸಿರಿ ಸಾಲೆ!

ರಮ್ಯ ವಿಹಂಗಮ, ಸೃಷ್ಟಿಯು ಅನುಪಮ
ಸಗ್ಗದ ಹಿರಿಸಿರಿ ಧರೆಗಿಳಿಯೆ
ಕಣ್ಹೃದ್ಯಂಗಮ, ವೃಷ್ಟಿಯ ರಂಜನ
ಹಬ್ಬದ ಚೆಲ್ ಘನ ತಿರೆತಿಳಿಯೆ
ಬಾನ್-ಇಳೆ ಮಿಲನಕೆ ಓಕುಳಿಯೆ, ರತಿರಮ ಮಿಥುನಕೆ ದೀವಿಗೆಯೆ
ತನುಮನ ಮಜ್ಜನ, ಭಾವನ ನಂದನ, ಧುಮುಕಿದೆ ಮೈತ್ರಿಯ ಜೇನ್ ಧಾರೆ!

ಪ್ರೇಮದ ರಿಂಗಣ, ಮನಮನ ಅಂಗಣ
ಪ್ರಣಯದ ಮಧುತೊರೆ ಹರಿಹರಿಯೆ
ಬಂಧನ, ಚುಂಬನ, ಒಲವಿನ ಅರ್ಚನ
ಜವ್ವನ ಚಂದನ ಹೊಳೆಹೊಳೆಯೆ
ಅನುಚಣ ಸವಿಯಿರುಳ್ ಹುಣ್ಣಿಮೆಯೆ, ಚಂದ್ರಚಕೋರಿಗೆ ಶ್ರೀನಿಧಿಯೆ
ಸರಸದ ಸೃಜನದೆ ಕವಿಮನ ವಿಕಸನ, ಬೆಳಗಿದೆ ಮಿಥುನದ ಧ್ರುವತಾರೆ
                                                                

ರಚನೆ - ’ಸಂತ’ (ಸ.ಗು.ಸಂತೋಷ್)
ತಾರೀಖು - ೨೨/೧೧/೦೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...