Thursday, June 14, 2018

ಕವಿತೆ: ಎಲ್ಲೇ ಇರಲಿ ನಾ ಹೇಗೆ ಇರಲಿ

             "ಎಲ್ಲೇ ಇರಲಿ ನಾ ಹೇಗೆ ಇರಲಿ"

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಸಿರಿಗನ್ನಡ ಎನ್ನ ಕರಣ ತುಂಬಿರಲಿ!

ಮನೆಯ ಒಳಗಿರಲಿ, ಹೊರಗೆ ಮನೆಯಿರಲಿ
ತಿಳಿದವರು ಜೊತೆಯಿರಲಿ, ಎನ್ನಲಿ ತಿಳಿವಿರಲಿಿ
ಸಂಸ್ಕೃತಿ ಅರಳಿರಲಿ, ನೆರಳು ಸಂಸ್ಕೃತಿಯಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಹೊಂಗನ್ನಡ ಎನ್ನ ನುಡಿಮುತ್ತಾಗಿರಲಿ!

ದುಡಿಮೆಯೆ ನುಡಿಗಿರಲಿ, ಹೊನ್ನುಡಿ ದುಡ್ಡಿರಲಿ
ನನ್ನವರು ಬಳಿಯಿರಲಿ, ದೂರ ನನ್ನವರಿರಲಿ
ಬಾಳೆಲ್ಲ ನಗುವಿರಲಿ, ಅಳುವೇ ಬಾಳಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಸವಿಗನ್ನಡ ಬಾಳುಸಿರ ಉಸಿರಾಗಿರಲಿ!

ಚೆಲುವು ಬಾಳಲಿ ಬರಲಿ, ಕರುನಾಡು ಚೆಲುವಿರಲಿ
ಕೆಚ್ಚು-ನೆಚ್ಚು ಹಚ್ಚಿರಲಿ, ಕನ್ನಡಿಗ ಈ ಕೆಚ್ಚಿರಲಿ
ಕನ್ನಡದೆ ಜಗ ತುಂಬಿರಲಿ, ತುಂಬು ಕನ್ನಡವಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಗುರುವೇ, ಚಂಗನ್ನಡದಿ ನಮ್ಮ ತನುಮನ ಮಿಂದಿರಲಿ!

ಹಸಿರೆಂದು ಕಾಡಿರಲಿ, ನುಡಿಯೆಮ್ಮ ಹಸಿರಿರಲಿ
ನರುಹೂಗಳೆಲರಿರಲಿ, ಕಸ್ತೂರಿ ಕಂಪಿರಲಿ
ದನಿ ಕೋಗಿಲೆ ಇಂಪಿರಲಿ, ತಾಯಿ ದನಿಯಿರಲಿ

ಎಲ್ಲೇ ಇರಲಿ, ನಾ ಹೇಗೆ ಇರಲಿ
ಜೊಂಗನ್ನಡ ಇಳೆಗೆ ಸಗ್ಗವನೆ ತರಲಿ!

ರಚನೆ - ಸ.ಗು.ಸಂತೋಷ್
ತಾರೀಖು - ೦೧/೦೫/೦೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...