“ರಮಣ”
ಜೀವದ ಕರೆಯ ಕೇಳಿಯೂ ಏಕೆ, ಸುಡುವ ಬಿಸಿ ಮೌನ ರಸಋಷಿಯೆ?! ||೧||
ಕಾವ್ಯದ ಕರೆಯ ಕೇಳಿಯೂ ಏಕೆ, ಬಿಡದ ’ಕವಿ ಮೌನ’ ರಸಋಷಿಯೆ?!! ||೨||
ನಿನ್ನನೆ ನೆಚ್ಚಿ ಬಂದಿಹ ಜೀವ, ಏಕಾಂತಕೆ ದೂಡದೆ ನನ್ನ
ಕೂಡಿ, ಬೆರೆತು, ಶೃಂಗಾರ ಸುರಿದು, ರತಲೋಕ ತೋರಿ ಜೀವರ್ಷಿ ಆಗದೆ ||೧||
ನಿನ್ನೊಳೆ ಹುಟ್ಟಿ ತುಂಬಿಹ ಕಾವ್ಯ, ಏಕಾಂತಕೆ ನೂಕದೆ ನನ್ನ
ಕೂಡಿ, ಒಲಿದು, ಕವಿವಾಣಿ ಸುರಿದು, ರಸಲೋಕ ತೋರಿ ಭಾವರ್ಷಿ ಆಗದೆ ||೨||
ಜೀವಕೆ ಜೀವ ಭಾವವೆ ತಾನೆ, ಇದ ಮರೆತು, ಕಲೆಯದೆ ನನ್ನ
ನವ ಭಾವ ತುಂಬಿ, ಒಲಿದ ಅರಸಿಯ, ಸೇರಿ ಬಳಸಿ, ನೀ ರಮಣನಾಗದೆ!!||೧||
ಕಾವ್ಯಕೆ ಕಾಯ ಭಾವವೆ ತಾನೆ, ಇದ ಕಳೆದು, ಮರೆಯದೆ ನನ್ನ
ನವ ಭಾವ ಚಿಮ್ಮಿ, ಅರಸಿ ಒಲಿದಿರೆ, ’ಕವಿಶೈಲ’ವೇರಿ ನೀ ರಮಣನಾಗದೆ!! ||೨||
ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೯/೦೯/೧೩
No comments:
Post a Comment