Thursday, June 14, 2018

ಕವಿತೆ: ಅವಳು ಸತ್ತಾಗ

              
              ಅವಳು ಸತ್ತಾಗ!

ಇಂದು ಕೆಂದಾವರೆಯ ಮೊಗ ಚೆಲುವು ಬಾಡಿಹುದು
ನಲ್ಲನಗಲಿಕೆಯಿಂದ ತನುಮನವು ಮುದುಡಿಹುದು

ನಿತ್ಯ ಸಂತಸ ಭೇಟಿ, ಏಕಾಂತ ಕಂಡಿಹುದು
ಪ್ರೀತಿ ಸರಸದ ಮಾತು, ಮೌನವನು ತಳೆದಿಹುದು
ನಲುಮೆ ಒಲುಮೆಯ ತೋಟ, ಮಸಣದೆಡೆ ನಡೆದಿಹುದು
ಮಸಣದ ಹೂವಿವಳ ಬದುಕು ಬರಡಾಗಿಹುದು

ಮೆಚ್ಚಿ ಹಚ್ಚಿದ ಕನಸು ನೂರಾರು ಕರಗಿಹುದು
ಪ್ರೇಮ ಲೋಕದ ಸೊಗಸು ಕನಸಾಗೆ ಉಳಿದಿಹುದು
ಜೊತೆ ಕಳೆದ ಚಣವೆಲ್ಲ ನೆನಪಾಗಿ ಉರುಳಿಹುದು
ಉರುಳುರುಳಿ ನೆನಪೆಲ್ಲ ಇವಳ ಉರುಳಾಗಿಹುದು!

ಮೋಹ ಮಾಯಾ ಶಕ್ತಿ, ಅಗಲಿಕೆಯ ಸಂದಿಹುದು
ನೇಹ ಮಧು ತಣ್ಣೀರು, ಕಣ್ಣೀರು ಹನಿಸಿಹುದು
ಪ್ರೇಮ ಸುಧೆ ಪನ್ನೀರು, ನಂಜನ್ನು ಎರೆದಿಹುದು
ಅಗಲೆ ಅಗಲಿದ ಇವಳ ನೆನಪೊಂದೆ ಇನ್ನಿಹುದು!

                                    ರಚನೆ - "ಸಂತ"(ಸ.ಗು.ಸಂತೋಷ್)
                                    ತಾರೀಖು - ೦೮/೧೨/೦೫       

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...