Friday, June 15, 2018

ಕವಿತೆ: ಬಿಸಿಲು ರಾತ್ರಿ

                 ಬಿಸಿಲು ರಾತ್ರಿ

ನೀಲಾಕಾಶದ ಕಪ್ಪು ಛಾಯೆಯಲಿ ಕೆಂಪು ನೇಸರನು
ಬಿಸಿಲ ಬೇಗೆಯ ನೀಡಿ ತಂಪಾಗ ಹೊರಟಿಹನು
ಅನುಜ ಚಂದಿರನೆಲ್ಲೋ ಮೇಘ ಹಿಂಬದಿಯಲ್ಲಿ
ಹಣಿಕಿಣುಕಿ ತುಂಟಾಟ ನಡೆಸಿಹನು!

ನಿಬಿಡತೆಯ ಕಾಣದೆ ತರುವೆಲ್ಲ ಚೆಲ್ಲಾಪಿಲ್ಲಿ,
ಎಲರಲ್ಲಿಲ್ಲಿ, ಒಮ್ಮೊಮ್ಮೆ, ತರಲು ಬಿಸಿತಂಪು!
ಘ್ರೀಷ್ಮಾಗ್ನಿ ನಂದಿ ಶಿಶಿರ ಬಂದಂತೆ
ಮಸಣ ಮೌನಕೆ ಸಾಕ್ಷಿ ಗುಡ್ಡಗಾಡುಗಳಿಲ್ಲಿ,
ನೆಲಕಚ್ಚುತಿರೆ ಎಲೆಹೂವು ಮುದಿತನದಲ್ಲಿ!
ಮನೆ ಸೇರುವ ಹಕ್ಕಿಗಳ ಮರೆತ ಚಿಲಿಪಿಲಿಯಲ್ಲಿ!
ಎತ್ತೆತ್ತಲೆಲ್ಲಾ ಕಡುಕಪ್ಪು ಮುಸುಕದ ಹರಡಿ
ಸೌಮ್ಯತೆಯ ಹಿಂದೆಲ್ಲೊ ಅನ್ಯ ಮರ್ಮವ ಕದಡಿ
ಅರಹುತಿದೆ ನೂರೆಂಟು, ಪರಿಸರದ ನೀರವತೆ!

ಆ!!!!!!
ಮುಂಗಾರು ಮೋಡದ ಮೇಡಿನಲಿ, ಮಡುವಿನಲಿ!
ಕೋಲ್ಮಿಂಚ ಬೆಳಕದೇನೊ?!, ಇರುವುದಲ್ಲೇನೊ?!
ಕಥಾಸಾಗರದ ಭೂತಕೂಟದ ನೆಲೆಯೊ...?!
ಇಲ್ಲವೇ.....................?
                                              ರಚನೆ:   ಎಸ್.ಜಿ.ಸಂತೋಷ್
                                              ದಿನಾಮ್ಕ: ೧೬/೦೧/೦೩

ಪ್ರೇರಣೆ: ನನ್ನ ಗೆಳೆಯ ಪೃಥ್ವಿ ಬರೆದು ಕಳುಹಿಸಿದ ವರ್ಣಚಿತ್ರ... ಅದು ಬಲು ವಿಚಿತ್ರವಾದ ಚಿತ್ರಣ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...