Saturday, June 23, 2018

ಕವಿತೆ: ಮೃತ್ಯುಹೋಮ

        ಮೃತ್ಯುಹೋಮ

ಮುಸ್ಸಂಜೆಯ ಬಾಂದಳದ ಕೆಂಪು ಛಾವಣಿಯ ಅಡಿಯಲ್ಲಿ
ಬೋಳ್ ಮರಗಳ, ಕೆನ್ನಲರಿನ ನಿಬಿಡ ಕಾನನದಲ್ಲಿ
ಪ್ರಕೃತಿಯ ವಿಕೃತಿಗೆ ಸೆರೆಯಾದ ಭೂತಾಯಿ ಮಡಿಲಲ್ಲಿ
ನಡೆಯಲಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಮೇಳ ಕುಣಿತಗಳ ಗದ್ದಲದಿ ಕೂಡಿ ಹೊರಟಿದೆ ದಿಬ್ಬಣ
ಮೈಗೆ ಅರಿಶಿನ, ಕೊರಳಿಗೆ ಹೂಮಾಲೆ, ನವವಧುವಿನಾಭರಣ
ಅರಿತ ಇವರಿಗೆ ಸಂಭ್ರಮ, ಅರಿಯದ ವಧುವಿಗೂ ಸಂಭ್ರಮ
ನಡೆಯಲಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಹೊಳೆವ ಕೈಖ(ಕ)ಡ್ಗ, ಧೃಡ ಕಪ್ಪು ಕಾಯ, ವರನ ಮೈಮಾಟ
ಬಳಿ ಬಂದ ವರನಿವನು ಯಾರೋ? ವಧುವಿನ ಓರೆನೋಟ
ವರನ ಕೆಂಗಣ್ಣು ಹುಟ್ಟಿಸಿರೆ ಭೀತಿ, ಪ್ರಾರಂಭ ಓಟದ ಆಟ
ನಡೆಯುತಿದೆ ಮೃತ್ಯುಹೋಮ ಮನುಜತೆಯ ಮೃತ್ಯುಹೋಮ

ದಿಕ್ಕೆಟ್ಟು ಓಡುತಿಹ ವಧುವ ಹಿಡಿದೆಳೆವ ದುರ್ಜನರ ನಡುವಲ್ಲಿ
ಸಾವಿನ ನೋವು, ಪ್ರಾಣ ಪಕ್ಷಿಯ ಕೂಗು, ಹರಿಯುತಿಹ ಗಗನದಡಿಯಲ್ಲಿ
ಅಟ್ಟಹಾಸದ ಕೇಕೆ, ಬಾಳ ಮೌಲ್ಯದ ಬೇಟೆ, ಮೆರೆದಿಹ ಬುವಿಯಲ್ಲಿ
ನಡೆಯುತಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಸೋತು ತಲೆತಗ್ಗಿಸಿ ಕೊನೆಗೆ, ನಿಂತ ವಧುವಿನ ಕತ್ತು
ವರದೈತ್ಯನ ಖ(ಕ)ಡ್ಗ ಹೊಡೆತಕ್ಕೆ ಇಳೆಗುರುಳಿ ಬಿತ್ತು
ತಾಯಿ ಭುವನೇಶ್ವರಿಯ ಚೆಲುವ ಮನಸೀಗ ಒಡೆದ ಮುತ್ತು
ನಡೆದಿದೆ ಮೃತ್ಯುಹೋಮ ಮನುಜತೆಯ ಮೃತ್ಯುಹೋಮ

ಬಾಂದಳದ ಕೆನ್ಹೊನಲು ಧರೆಗೆ ದೊರೆತ ಬಳುವಳಿಯು
ದಯೆ-ಧರ್ಮ-ನೀತಿಯ ಸಾವು, ಕೆನ್ನಲರಿಗೆ ಚಂದನವು
ಪ್ರಕೃತಿಯ ವಿಕೃತಿಗೆ ಜರುಗಿದೆ ಮತ್ತಷ್ಟು ಸಿಂಗರವು
ನಡೆದಿದೆ ಮೃತ್ಯುಹೋಮ, ಮನುಜತೆಯ ಮೃತ್ಯುಹೋಮ

ಮೌಢ್ಯಾಂಧಕಾರದ ಕೃಪಾಕ್ಷಿ ಇರಲು ಜನರ ಮನಕಿಲ್ಲಿ
ತಲೆ ತಗ್ಗಿಸಿ, ಮನ ಕುಗ್ಗಿಸಿ ನಡೆವ ವಧುವೃಂದ ಬದುಕಿಸತ್ತಿದ್ದಲ್ಲಿ
ದೌರ್ಜನ್ಯ,  ದುರ್ವ್ಯಸನ, ವೈಧರ್ಮದ ವಿಷಪ್ರಾಶನ ನಿಲ್ಲದಿದ್ದಲ್ಲಿ
ಜ್ಞಾನಿಗಳ, ಧರ್ಮಯೋಗಿಗಳ ಶಾಂತತೆಯು ಕ್ರಾಂತಿಯಾಗದಿದ್ದಲ್ಲಿ
ನಡೆವುದು ಮೃತ್ಯುಹೋಮ ಮನುಜತೆಯ ಮೃತ್ಯುಹೋಮ.

            ರಚನೆ - "ಸಂತ" (ಸ.ಗು.ಸಂತೋಷ್)
            ದಿನಾಂಕ - ೦೬/೦೬/೦೨

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...