Saturday, June 23, 2018

ಕವಿತೆ: ...ನಲ್ಲೆನ್ನ ಸಾಹಿತ್ಯಲೋಕ ಹೀಗೇಕೆ?

...ನಲ್ಲೆನ್ನ ಸಾಹಿತ್ಯಲೋಕ ಹೀಗೇಕೆ?

ನನ್ನ ಸಾಹಿತ್ಯಲೋಕದ ಪರಿಯು ಹೀಗಾಗಿರುವುದೇಕಿಲ್ಲಿ?

ಹೊಮ್ಮುವುದು ನವಹುರುಪು ಒಮ್ಮೊಮ್ಮೆ ಬರಡಂತರಾಳಾದಲಿ
ಅದುವೆ ಬೈಗಿನಲಿ, ನಿಸಾರರ ಕವನಗಳ ಸವಿಸಾರದಲ್ಲಿ
ನಾಲ್ಕು ಪದಗಳ ಬರೆವೆ ಕಗ್ಗತ್ತಲ ಭವಿಷ್ಯವದಲ್ಲಿ
ಜಾರಿ ಬೀಳುವುದು ಬರವಣಿಗೆ, ಕವಿತೆ ಕನಸಾಗುವುದಲ್ಲಿ!

ಮುಂಜಾನೆ ನೇಸರನು, ಹುಣ್ಣಿಮೆಯ ಚಂದಿರನು ಎನಗೆ ಸ್ಫೂರ್ತಿಯು ಅಲ್ಲಿ
ಶಶಿ-ರವಿ-ತಾರೆಗಳ ಭೇದ ಕಾಣದ ಕುರುಡ ಕಬ್ಬಿಗನು ನಾನಿಲ್ಲಿ!
ಪ್ರಕೃತಿಯ ಮೈಚೆಲುವ, ಯೌವ್ವನದ ಸಿಹಿ ಒಲವ, ಬಣ್ಣಿಸಿದ  ರಸಕವಿಯಲ್ಲಿ
ಚೆಲುವು-ಒಲವುಗಳ ಕಾವ್ಯರಸ ತಿಳಿಯದ ನಿರ್ಜೀವಿ ಜೀವಿ ನಾನಿಲ್ಲಿ!

ಕರ್ಣ-ದೃಶ್ಯಾನಂದ, ಕಂಪು-ಪೆಂಪಿನ ಗಂಧ ಅನವರತ ಅಲ್ಲಿ
ಮುಪ್ಪಿನ ಜಡವೋ, ಬೆಪ್ಪಿನ ತೆರವೋ,  ಎನ್ನ ಪಂಚೇಂದ್ರಿಯಗಳಿಲ್ಲಿ!
ಹೊಸ ದಿಕ್ಕು - ಹೊಸ ಹುತ್ತು - ಹೊಸ ರಚನೆ ಅನುದಿನವು  ಅಲ್ಲಿ
ದಿಕ್ಕೆತ್ತ, ಮತಿಸತ್ತ ರಚನಾಲೋಚನೆಯು  ಎನದೀಗ ಇಲ್ಲಿ!

ಎನ್ನ ಕವನದ ಪೆಂಪು- ಕಸ್ತೂರಿ ಕನ್ನಡದ ನರುಗಂಪಿನಲ್ಲಲ್ಲಿ
ಕವನ ಕನ್ನಡಿಯಲೆನ್ನ ಕನ್ನಡಿಯ ದಿವ್ಯದರುಶನವದದೃಶ್ಯವಿಲ್ಲಿ!
ರಂಗು  ರಂಗಿನ, ಹೊಳಪು ಥಳುಕಿನ ವಸ್ತ್ರವಿನ್ಯಾಸ ಕವನಗಳಿಗಲ್ಲಿ
ಭಾವಸಾರವಿಲ್ಲದ ನಿಸಾರ ನಗ್ನತೆಯು ಎನ್ನ ರಚನೆಯದಿಲ್ಲಿ!

ರಚನೆ - "ಸಂತ" (ಸ.ಗು.ಸಂತೋಷ)
ದಿನಾಂಕ - ೨೯/೦೫/೦೨

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...