Saturday, June 23, 2018

ಕವಿತೆ: ನಿನ್ನ ಮೊದಲ ಪತ್ರ ಕಂಡಾಗ

           ನಿನ್ನ ಮೊದಲ ಪತ್ರ ಕಂಡಾಗ

ಓ ಗೆಳತಿ,
  ಆರು ವರುಷದ ಕಾಲ ಕಂದಕಕೆ ಸೇತುವೆಯು,
  ಇಂದು ನೀ ಎನಗೆ ಕಳುಹಿದ ಸ್ನೇಹದ ಓಲೆ

  ಆಶ್ಚರ್ಯ, ಸಂತೋಷ, ನವಹರುಷ ಸಿಂಚನವು,
  ನೆನಪಿನಂಗಳವದು ಈಗೆನ್ನ ಬೆಳದಿಂಗಳ ಬಾಲೆ!

  ಅಲ್ಲಿ ಹೈದರಾಬಾದಿನಲಿ, ಹತ್ತರಲಿ, ವಿದ್ಯುದ್ಧದಲಿ ನನ್ನೆದುರು ನೀನು,
  ನಿನಗೆನ್ನ ಮೊದಲ ಸ್ಥಾನವ ಬಿಡದೆ, ಮೊದಲೆನಗೆ ನೀ ಬಿಟ್ಟುಕೊಡದೆ,
  ನಡೆದ ಹಣಾಹಣಿಯ ರೋಮಾಂಚನ, ಈ ಪತ್ರಮಿಂಚಿನಲಿ

  ಆಗಸ್ಟ್ ತಿಂಗಳ ಮಳೆಯ ಚಳಿಯಲ್ಲೂ ನಾ ಬೆವತ ದಿನವು,
  ನೀ ಎನ್ನ ಮೊದಲು ಕಸಿದು ಎಲ್ಲರ ಬೆರಗುಗೊಳಿಸಿದ ಚಣವು,
  ಮುಂದೆಲ್ಲ ಜಯಿಸಿ ನಾ ಮೆರೆದ ಬಿಂಬ, ಈ ಪತ್ರಗನ್ನಡಿಯಲಿ

  ವೇದಾವತಿಯವರ ಮನೆಯಲ್ಲಿ,  ಮಾತಿನ ಚಕಮಕಿಯಲ್ಲಿ,
  ಸಾಹಿತ್ಯ ಮಂದಿರದ ಚದುರಂಗದಾಟ, ನಮ್ಮಿಬ್ಬರಲ್ಲಿ
  ನಿನ್ನ ಸೋಲಿಸಿ ಗೆದ್ದ ಹೆಮ್ಮೆಯ ಸುಧೆಯು, ಈ ಪತ್ರಧಾರೆಯಲಿ!

  ಗುರುವರೇಣ್ಯರ ನುಡಿಯಲ್ಲಿ ಎಂದಿಗೂ ನಾವೆರಡು ಮುತ್ತು,
  ನೃಪತುಂಗ ಶಾಲೆಯ ಕೀರುತಿಯ ನಾವು ಬೆಳಗುವ ಕನಸಿತ್ತು.
  ಆ ದಿವ್ಯದೇಗುಲದ ಸ್ಫುಟ ಕಥೆಯು - ಈ ಪತ್ರಗಾನದಲಿ!

  ಜೀವನದ ಹಾದಿಯಲಿ ಸುಖ-ದುಖಗಳು ಸಮಸಮವು,
  ಅಂತೆಯೆ ಆ ಬಾಳಿನಲು ಕೂಡ ಹಲವಾರು ಸಿಹಿ-ಕಹಿಯು,
  ಆ ನಮ್ಮ ಬಾಳಿನ ವರ್ಣ-ವೈಚಿತ್ರ್ಯ, ಈ ಪತ್ರಚಿತ್ರದಲಿ

  ಇಂದು ನಾ ಎಲ್ಲೋ, ನೀ ಎಲ್ಲೋ, ದೂರ ಬಹುದೂರ
  ಆದರೂ ನಮ್ಮಿಬ್ಬರ ಸೇರಿಸಿದೆ, ಈ ಓಲೆಯ ಮಾಲೆ
  ನಮ್ಮಿಬ್ಬರ ನಡುವಿರಲಿ ಸ್ನೇಹಸ್ಪಂದನ, ಗೌರವದ ಚಂದನ
  ಆಶಿಸುವೆ -ಸದಾ ಬರೆವೆ ಹೀಗೆಯೆ - ಎನ್ನ ಮಿನುಗುತಾರೆಯೆ!

            ರಚನೆ - ಸಂತ (ಸ.ಗು.ಸಂತೋಷ್)
            ದಿನಾಂಕ - ೦೨/೦೬/೦೨

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...