Saturday, June 23, 2018

ಕವಿತೆ: ಚಿನ್ನದಾಯಣ

             ಚಿನ್ನದಾಯಣ

ಸಂಜೆ ಆರರ ಸುಮಾರಿಗೆ, ಎಂದಿನಂತೆ ನಾನು
ನನ್ನ ಮೋಟಾರ್ ಬೈಕಿನಲಿ, ಆಫೀಸಿನಿಂದ ಬಂದೆ ಮನೆಗೆ

ಪಕ್ಕದ ಮನೆಯ ಅಂಗಳದಲ್ಲಿ ಹೆಂಗಸರ ಗುಂಪು!
"ಹೌದಾ!","ಚೆನ್ನಾಗಿದ್ರಿ!","ಎಷ್ಟಾಯ್ತು?","ಎಲ್ಲಿ?"
ಹೀಗೆ ಇನ್ನೂ ಹತ್ತಾರು..; ಬೀದಿಗೇ ಕೇಳಿಸಿತು!

ಅಷ್ಟರಲಿ ಇನ್ನೊಂದು ಅಚ್ಚರಿ! ಗೇಟ್ ಬಳಿ ನನ್ನಾಕೆ!

ಟಿ.ವಿ. ನೋಡುತ್ತಲೋ, ಮಲಗು ಕೋಣೆಯ ಮೇಜಿನ ಮುಂದೆ ಶೃಂಗಾರ ನಡೆಸುತ್ತಲೋ  ಇರಬೇಕಾದವಳು ಏನಿಲ್ಲಿ?!

ಹಲ್ಲೆಲ್ಲ ತೋರಿಸುತ ಗೇಟನ್ನು ತೆರೆಯಲು,
ನಾನು ನಕ್ಕೆ ಅಮ್ಮಾವ್ರು ಮುನಿದರೆ ಎಂದು!

ಒಳಗೇ ಶಂಕೆ??????

ಮನೆಯೊಳಗೆ -
  "ಪಕ್ಕದ ಮನೆ" ಎನ್ನುವಷ್ಟರಲ್ಲಿ ಅಮ್ಮನವರ ಸರದಿ
  "ನೀರು ಬೇಕೆ?" "ಕಾಫಿ ತರಲೆ?"
  "ಅಪರೂಪದ ಸೇವೆ" ಬೇಡವೆಂದರೆ ನಾ ಮೂರ್ಖ,
  "ತಾ" ಎಂದೆ.
  ಸರಸರನೆ ಅಲ್ಲಾದ್ದೀನನ ಜಿನ್ನಂತೆ ತಂದಿಟ್ಟಳು
  ಆಶ್ಚರ್ಯ ಮತ್ತೆ! ಕಾಫಿಯ ಜೊತೆ ಬಿಸಿಬಿಸಿ ಆಂಬೊಡೆ
  ಕಣ್ಣೆತ್ತಿ ನೋಡಿದೆ, "ನಿಮಗಿಷ್ಟ ಅಂತ ಮಾಡ್ದೆ",  
 ಎದೆ "ಧಕ್ ಧಕ್"
 ಬಾಯಲ್ಲಿ ನೀರೂರಿತು, ತಟ್ಟನೆ ಒಂದನ್ನು ಬಾಯಿಗೆ ಹಾಕಿದೆ,
  ಇನ್ನೆರಡು ತಿಂದೆ, ಎಲ್ಲಾ ಉಪ್ಪುಪ್ಪು, ಹೇಳಿದರೆ ಗೊಣಗಾಡುವಳು ಗೊತ್ತು
  "ಕಾಫಿಯೋ", "ಕಶಾಯವೋ" ತಿಳಿಯಲಿಲ್ಲ ತೆಪ್ಪಗೆ ಕುಡಿದೆ
  ಎಲ್ಲಾ ಗಂಡಂದಿರಂತೆ  ಕೊನೆಗೆ ಹೇಳಿದೆ "ಎಲ್ಲಾ ಚೆನ್ನಾಗಿದೆ."
  ತಾಜ ಆಗಿ, ಸೋಫಾದ ಮೇಲಿದ್ದ ದಿನಪತ್ರಿಕೆ ಹಿಡಿದೆ
  "ಇವತ್ತು ನಮ್ಮ ಪಕ್ಕದ..." ಶ್ರೀಮತಿಯ ವಾಣಿ ಕಿವಿಮುತ್ತಿತು
  "ಚಿನ್ನದಾಯಣ" ಶುರು ಇನ್ನು - ಮಾಡುವುದೇನು? ಯೋಚಿಸಿದೆ?...
  ಕೇಳಿಸಿದರೂ, ಕೇಳಿಸದ ಹಾಗೆ ಪತ್ರಿಕೆ ಮೇಲೆ ಕಣ್ಣಾಡಿಸಿದೆ
  "ಏನೂಂದ್ರೆ" ಘರ್ಜಿಸಿದಳು, ಬಡಪಾಯಿ ನಾ ಹೆದರಿ "ಏನೆ?.." ಎಂದೆ
  "ಪತ್ರಿಕೆ ಆಕಡೆ ಇಡಿ, ಸದಾ  ಪೇಪರ್,ಪೇಪರ್.." ಗೊಣಗಿದಳು
  "ಪಕ್ಕದ ....ಮ್ಮನಿಗೆ ಅವರ್ಯಜ್ಮಾನ್ರು ವಜ್ರದ ಓಲೆ ಮಾಡಿಸಿದ್ದಾರೆ..
  ಏನ್ ಚೆನ್ನಾಗಿದೆ ಅಂತಾ! ನನ್ಗೂ ಅಂಥದೀಗ ಮಾಡ್ಸಿಕೊಡಿ ಅಂದ್ರೆ"
  ಆಯಿತು ಪೀಠಿಕೆ ಆಯಣಕೆ, ಇಟ್ಟಳು "ಬತ್ತಿ", ಹಾಕಿದಳೆನ್ನ ಜೇಬಿಗೆ ಕತ್ರಿ!
  ಕಳೆದ ತಿಂಗಳಿನ್ನೂ ಮಾಡಿಸಿಕೊಟ್ಟಿದ್ದೆ ಚಿನ್ನದ ಬಳೆ-ಓಲೆ
  ಮೆರೆದಿದ್ದಳು, ಕುಣಿದಿದ್ದಳು, ಮುಂದಿನ ವರುಷದವರಗೆ ಸಾಕೆಂದಿದ್ದಳು
  ಮತ್ತಾಗಲೆ ಹೊಸ ಕೋರಿಕೆ, ನಡೆಸುವ ಬಡಪಾಯಿ ನಾನು ಇರುವೆನೆಂದು.
  ಬಂದ ಕೋಪವ ತಡೆಹಿಡಿದು -
  "ಆದಾಗ ನೋಡೋಣ, ಈಗಾಗದು ಹಣವಿಲ್ಲ" ಎಂದೆ - ಅಷ್ಟೆ!
  ಅಯ್ಯಯ್ಯೋ! ಮನೆಕಂಪ!
  ಶುರುಮಾಡಿದಳು ಕೂಗಾಟ, ಹಾರಾಟ, ನಾಟಕಾಟ - ನನಗೆ ಪೇಚಾಟ
  ಶಪಿಸಿದಳು ಎನ್ನ, ಮನೆ ಬಿಡುವೆನೆಂದು ಹೆದರಿಸಿದಳು, ಅತ್ತಳು,
  " ನಾ ಕಕ್ಕಾಬಿಕ್ಕಿಯಾದೆ!  ಹೆಂಗಸರೆ ಹೀಗೇನು?"
  " ಒಡವೆ ಬಿಟ್ಟರೆ ಬಾಳಿಲ್ಲೇನು?"
  ನನ್ನವಳಿಗೆ "ಅದು-ಇದು " ವಿವರಿಸ ಹೊರಟೆ - ಊಹೂ ಒಪ್ಪಲಿಲ್ಲ
  ನಾಲ್ಕೈದು ಘಂಟೆಗಳ ಪರಿಪರಿಯ ನಟನೆ ಅಮ್ಮಾವ್ರಿಂದ - ಓಲೆಗಾಗಿ
  ಎಲ್ಲ ನಾ ಬಲ್ಲೆ, ಅದು ಅವಳಿಗೂ ಗೊತ್ತು, ಆದರೂ ಬಿಡಳು - ಓಲೆಗಾಗಿ
  ಬೇಸತ್ತು, ತಲೆಕೆಟ್ಟು, ತಲೆಯಾಡಿಸಿದೆ ಕೊನೆಗೆ - ಹೊಸರಾಗ ಆಗ
  "ಬೇಕಾಗಿಲ್ಲ! ಇಷ್ಟು ನೋಯಿಸಿ ಕೊಡಿಸಬೇಕಾಗಿಲ್ಲ! ಈಗಿರುವುದೂ ಬೇಡ!"
  ಮತ್ತೊಂದು ಘಂಟೆ ನಡೆಸಿದಳು, ಈ ಪಟ್ಟಿನಲಿ ಆಲಾಪನ
  ನಂತರ ಕ್ಷಣಕಾಲ ಮೌನ, ಆಮೇಲೆ ಭಾರವಾದ ಮಾತು,
  ವಾತಾವರಣದಲ್ಲಿ ಇರಲು ಇನ್ನೂ ಅಲ್ಲಲ್ಲಿ ತೂತು.
  ಸೋತು ನೀರಾದ ನಾನು, ಕಣ್ಮುಚ್ಚಿದೊಡನೆಯೆ ಆವರಿಸಿತು ನಿದ್ದೆ
  ಅತ್ತು ಗೆದ್ದ ಅವಳಿಗೆ ಹೊಸಹೊಸ ಕನಸು, ಬರಬೇಕಿನ್ನೆಲ್ಲಿಯ ನಿದ್ದೆ
  ಪಕ್ಕದ ಮನೆಯ ....ಮ್ಮನವರ ಕೃಪೆಯಿಂದ,  ಅವರ ಬಿಟ್ಟಿ ಪ್ರದರ್ಶನದಿಂದ
  ಬಹುಶಃ, ನಡೆದಿರಬೇಕು ಇನ್ನೂ ಹಲವೆಡೆ ಇಂದು, ಆಯಣ - ಚಿನ್ನದಾಯಣ

             ರಚನೆ - ಸಂತ (ಸ.ಗು.ಸಂತೋಷ್)
             ದಿನಾಂಕ - ೨೩/೦೬/೦೨

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...