Wednesday, May 22, 2019

ಕವಿತೆ: ಹಾರುವ ಓತಿ

ಪೂರ್ಣಚಂದ್ರ ತೇಜಸ್ವಿ ನನ್ನ ಅಚ್ಚುಮೆಚ್ಚೆನ ಬರಹಗಾರರಲ್ಲಿ ಒಬ್ಬರು...ಅವರ ಬಹುತೇಕ ಎಲ್ಲಾ ಪುಸ್ತಕಗಳನ್ನು ಅನೇಕ ಬಾರಿ ಓದಿದ್ದೇನೆ, ಮೂಡಿಗೆರೆಯ ಅವರ ಮನೆಗೆ ಹೋದಾಗಿನ ನೆನಪು ಅವಿಸ್ಮರಣೀಯ 🙏🏻
ಅವರ ಯಾವುದೆ ಬರಹವನ್ನು ಓದಿದರೂ, ಅದಕ್ಕೆ ಓದುಗರನ್ನು ಸೂಜಿಗಲ್ಲಿನಂತೆ ತನ್ನೆಡೆ ಸೆಳೆವ ಅದ್ವಿತೀಯ ಶಕ್ತಿ ಇದೆ ಎನಿಸುತ್ತದೆ.

ಈಗ ಕೌಶಿಕ್ ಬರೆದಿರುವ "ಹಾರುವ ಓತಿ"ಯ ಅನುಭವ ಕಥನದ ಪ್ರತಿಯೊಂದು ಎಳೆಯೂ ತೇಜಸ್ವಿಯವರ ಕಥೆಯೊಂದಿಗೆ ಬೆಸೆದು ಹೋಗಿದೆ... ಪ್ರಾಯಶಃ ತೇಜಸ್ವಿ ಅಭಿಮಾನಿಗಳಿಗೆ ರಸದೌತಣ, ಅವರ ಬರಹಗಳ ಓದಿಲ್ಲದವರಿಗೆ ತೇಜಸ್ವಿ ಅವರ ಪುಸ್ತಕಗಳನ್ನು ಓದಲು ಈ ಬರಹ ತೀವ್ರವಾಗಿ ಸ್ಫೂರ್ತಿ  ನೀಡುವುದು ಮಾತ್ರ ಖಂಡಿತ! ☺

ಈ ಕಾಲಘಟ್ಟದ ಓದುಗನಾಗಿ, ಕನ್ನಡ ಸಾಹಿತ್ಯ ಪ್ರಿಯನಾಗಿ, ಕೌಶಿಕ್ ಅವರಿಗೆ ನನ್ನ ಅಭಿನಂದನೆಗಳು‌👍🏻☺

ಕಾವ್ಯ ಪ್ರಿಯನಾದ ನನಗೆ ಲೇಖನದ ಬಗ್ಗೆ ಒಂದಿಷ್ಟು ಕಾವ್ಯಾತ್ಮಕವಾಗಿ ಬರೆವ ಮನಸ್ಸಾಯಿತು, ಅದು ಇಲ್ಲಿದೆ☺

*********************
ಸೃಷ್ಟಿ ಸೊಗಸು ಸವಿಪ ನಮಗೆ
ತೇಜಸ್ವಿ ಲೋಕಕೊಯ್ದ ನಿಮಗೆ
ವಂದನೆ ಅಭಿನಂದನೆ!

ಅವರ ಮಾಯಾಲೋಕ ಸುತ್ತ, ಹೊಸತು ರೀತಿ ವಿಹರಿಸುತ್ತ!
ಅವರ ಬರಹ ಬಳಸಿ, ಮೆರೆಸಿ
ನವ್ಯ ಕಥನ ಸೊಗಸು ಹರಿಸಿ
ತೋರುತಿಹುದು ಹೊಸತು ಜನ್ಮ! ನವನವೀನ ಬರಹ ಧರ್ಮ!
ಮರಳಿ ಮಣ್ಣಿಗೊಯ್ವ ಕಂಪು, ಸರಳ ಭಾಷೆ, ಮಧುರ, ತಂಪು!

ಘಟ್ಟದಂಚಿನಲ್ಲಿ ಮೊಳೆತು, ಹಾರೊ ಓತಿಯಲ್ಲಿ ಕುಳಿತು!
"ಹಾರೊ ಓತಿ ಜಾಡಿನಲ್ಲಿ, ಎಡವಿ ತಡವಿ ಅಡವಿಯಲ್ಲಿ
ಅರಸಿ, ಅರಸಿ ಬೆವರ ಹನಿಸಿ, ಗೆಲುವ ನಗೆಯ ಕಡೆಗೆ ಸೂಸಿ"
ಮೆರೆದ ಘಟನೆ ತರುವ ನೆನಪು
ಪಡೆಯಿತಿಲ್ಲಿ ಹೊಸತು ಉಡುಪು!!

ಧೂಳು, ದೊಂಬಿ, ಕೊರೆವ ಬೀಡು!
ನಿತ್ಯ ಇದುವೆ, ನಮ್ಮ ಪಾಡು!
ಕಾಡು ಮೇಡು ಗುಡ್ಡ ಗಾಡು
ನಡುವೆ ಬದುಕು, ಅಲ್ಲಿ ಪಾಡು!
ತೆಂಗು ಕಂಗು ರಮ್ಯ ತೋಟ, ಮನವ ತಣಿಪ, ತೆರೆಪ ನೋಟ!
ಮರಳೆ ಮಣ್ಣಿಗೆನಿತು ಮಾಟ!
ದೈವ ಮಾಯೆ, ಯುಕ್ತ ಪಾಠ!!

ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೧೫/೦೪/೨೦೧೯

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...