Wednesday, May 22, 2019

ಕವಿತೆ: ಮಧುರ ಮೈತ್ರಿ

ಮಧುರಮೈತ್ರಿ

ಅನಿರೀಕ್ಷಿತ! ಆಕಸ್ಮಿಕ!  ಮರೆಯಲಾರೆ ನಮ್ಮಿಬ್ಬರ ಇಂದಿನ ಭೇಟಿ!
ಮಧುರ ಮೈತ್ರಿಯ ಯುಗಳ ಗೀತೆ, ಚಿಮ್ಮಿತೊಮ್ಮೆಗೆ ಎದೆಯ ಮೀಟಿ!

ಆನಂದ! ಆಶ್ಚರ್ಯ! ಇದಾವುದಕೂ ಪಾರವೆ ಇಲ್ಲ
ತುಂಬುಗತ್ತಲಿನ ಸಂಜೆ, ರಸ್ತೆಯ ವಾಹನಗಳ ಗಜಿಬಿಜಿ
ಹೀಗಿದ್ದು ನೀ ಹೇಗೆ ಗುರುತಿಸಿದೆ ಅದು ನಾನೆ?!
ಕೇಳಿದೊಡೆ ನಿನ್ನ ದನಿ,  ಅನಿಸಿತಲ್ಲ  ಅದು ನೀನೆ!
 
ಧಾವಂತ ಬದುಕಿನಲಿ ದೊರೆತದ್ದು ನಮಗೆ ಕೆಲ ನಿಮಿಷ
ಇಬ್ಬರೂ ಹಿಗ್ಗಿನಲಿ ನಡೆಸಿದೆವು ಮಾತು ಬಲು ಬಿರುಸಿನಲಿ
ಪುಂಖಾನುಪುಂಖವಾಗಿ ಬಂದು ಸಾಗಿದವು ಚರ್ಚೆಯಲಿ
ನಮ್ಮ ಅಂದು ಇಂದು ನಾಳೆಗಳು, ಆಗು ಹೋಗುಗಳು!

ಹಗುರಾದ ಮನಸಿನಲಿ ನಲಿನಲಿದು ಬೀಳ್ಕೊಟ್ಟು ಸಾಗಿದೆವು
ಮುಸ್ಸಂಜೆಯ ಮಧುರ ಕ್ಷಣಗಳ ಬೆಸೆದು ನೆನಪಾಗಿಸುತ
ಮರುಮಿಲನದ, ಹೊಸಹಗಲಿನ  ಸುಖವ ಕನಸಾಗಿಸುತ
ಅರಳಿ ಘಮಿಸಿತ್ತು, ಮರಳಿ ಮಿನುಗಿತ್ತು, ಮೈತ್ರಿ ಮಲ್ಲಿಗೆ!

ರಚನೆ: “ಸಂತ” (ಸ.ಗು ಸಂತೋಷ)
ತಾರೀಖು: ೦೧/೧೨/೨೦೧೮
ಪ್ರೇರಣೆ: ನನ್ನನ್ನು ಮಿತ್ರ ಸಂತೋಷ(ಲಂಬು, ಬೆಂಕಿ) ಆಕಸ್ಮಿಕವಾಗಿ ಬಲು ಅನಿರೀಕ್ಷಿತ ರೀತಿಯಲ್ಲಿ
ಭೇಟಿಯಾದ ರಸಸಂಜೆಯ ನೆನಪಿನಲಿ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...