Friday, June 21, 2019

ಕವಿತೆ: ತಲೆಮಾರು

                           ಶ್ರೀ

                      ತಲೆಮಾರು!
ಅಜ್ಜ ಅಜ್ಜಿಯ ಜೊತೆಗೆ, ಅಜ್ಜಿ ತಾತನ ಜೊತೆಗೆ
ಹೋಗಲು ಶಾಲೆಗೆ ನೀನು, ಸ್ವರ್ಗಕೆ‌ ಮೂರೆ ಗೇಣು
ಮೊಮ್ಮೊಗಳ ಕೂಡಿ, ಅವಳ ತುಂಟಾಟವ ಸವಿದು
ಹೋಗಲು ಶಾಲೆಗೆ ನೀವು, ಸ್ವರ್ಗಕೆ ಮೂರೆ ಗೇಣು

ಹಸುರಿನ ಸಿರಿವನ ನಡುವೆ, ಶಾಲೆಯಲೆಲ್ಲರ ಕಲೆತು,
ಕಟ್ಟಡ, ಕೊಠಡಿಯ ನೋಡಿ,  ಪರಿಚಯ ಕುಶಲಗಳಾಗಿ,
ಎಲ್ಲೆಡೆ ಕಚಪಿಚ ಇಂಪು! ಸಂತಸ, ಸೊಗಸಿನ ತಂಪು!
ಸವಿಯುತ ಪರಿಪರಿ ನೋಟ, ಅರಳಿತು ನೆನಪಿನ ತೋಟ!

ಸಾಗುತ ಆಟದ ಮೋಡಿ! ಹಾಡು ಕುಣಿತದಿ ಕೂಡಿ
ಪೋಣಿಸಿ ಸೂಜಿಗೆ ದಾರ, ಮಡದಿಯ ಮುಡಿಗೆ ಸಿಂಗಾರ
ಎಲ್ಲರ ಮನ ಹಗುರಾಗಿ! ಕೇಕೆ ಶಿಳ್ಳೆಯ ಹಾಕಿ!
ಬಾಲ್ಯದ ಪುನರನಾವರಣ, ಮಕ್ಕಳಿಗೆ ರೋಮಾಂಚನ!

ಮಕ್ಕಳ ಕೂಟದಿ ಮಕ್ಕಳೆ ಎನಿಸಿ, ನಲಿಯುತ ನಲಿಸಿ
ಪರಿಪರಿ ಸೋಜಿಗ,  ಅಭಿನಯ ವಿಸ್ಮಯ, ತೋರಿಸಿ ತಣಿಸಿ,
ನೂತನ,  ಅತಿಶಯ, ಸಂತಸ ಸುಖಮಯ ಲೋಕವ ಸೃಜಿಸಿ
ಆದಿರಿ ನೀವೆಯೆ ಎಲ್ಲ ಮಾಯಾಲೋಕದ ಮಾಂತ್ರಿಕರು!

ನಿಜದಿ ಅನನ್ಯ! ಸೃಷ್ಟಿಯೊಳಿರುವ  ಪ್ರತಿ ಸಿರಿನಂಟು
ಅನುಭವ ಪಡೆದರೆ ಮಾತ್ರವೆ ತಿಳಿವುದು ಏನು ಎಂತು
ವಂದಿಪೆ, ನಮಿಪೆ, ಬುವಿಯಲಿದೊ ಸಗ್ಗದ ಸಿರಿಬಂತು!
ಬೆಳಗುತಲಿರಲಿ ಹೀಗೆಯೆ ತಲೆಮಾರುಗಳ ಈ ತಂತು!

ಪ್ರೇರಣೆ: ಸೃಷ್ಟಿಯ ಶಾಲೆಯಲ್ಲಿ Grand parents day (೦೬/೦೯/೨೦೧೮) ಆಚರಿಸಿದ್ದರು.
 ಅದರ ಸವಿ ನೆನಪಿನಲ್ಲಿ…
ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೦೧/೧೧/೧೮

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...