Friday, December 13, 2019

ಕವಿತೆ: ಮಂದ್ರ

              ಮಂದ್ರ

ಮರಳಿ ಬಾರ ಬಳಿಗೆ ಆ ನೆನ್ನೆ, ಒಂಟಿಯಾಗಿಹೆ!
ಇದ್ದುದೆಲ್ಲ ಇಲ್ಲದಾಗೆ ಈ ಜೀವ ದಣಿದಿದೆ!

ಅರಿತು ಬೆರೆತು ಸಾಗುವೆಡೆ ನನ್ನೆ ಮರೆತಿಹೆ!
ಮೆರೆದ ಹಿರಿಮೆ ಬೆಳೆಸುವೆಡೆ ಸೋತು ನಿಂತಿಹೆ
ಗಳಿಸಿ ಬೆಳೆಸಿ ನೆಚ್ಚಿದೆಡೆ ಇರುಳು ತುಂಬಿದೆ!
ಒಲವು ಗೆಲವಿನಸ್ತಮಾನ! ನೆನಪು ನಲುಗಿದೆ!!

ಮುರಿದು ಬಿದ್ದ ಎದೆವೀಣೆ ತಂತಿ ಮೀಟುತೆ!
ತನಗೆ ತಾನೆ ಅರಿವಿರದೆ ತಾನ ಹೊಮ್ಮಿದೆ!
ಶ್ರುತಿಯು ತಪ್ಪಿ, ಲಯವಿರದೆ ಲಾಗ ಹಾಕುತೆ!
ಮೈಮರೆವಲಿ ಚಿತ್ತಮೇಳ ಹಾಗೆ ಸಾಗಿದೆ!

ಪ್ರೀತಿ ಸ್ನೇಹ ಹಂಚುವೆಡೆ ಕೊರತೆ ತುಂಬಿರೆ
ಒಡಲು,ಮಡಿಲು ಬೇನೆಯಲಿ ಬೆಂದು ಕಮರಿದೆ
ಏಕೊ, ಏನೊ ತಿಳಿಯದೆಯೆ ಎಲ್ಲಾ ಕರಗಿರೆ
ಮಾತು ಮುಗಿದು ಮೌನಬೆಳೆದು ಶೂನ್ಯ ಕಾಡಿದೆ!

ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೦೮/೧೨/೨೦೧೯

ಪ್ರೇರಣೆ
 ಮನದ ಸಿಂಹಾವಲೋಕನ ಮಂದ್ರ ಸ್ಥಾಯಿಯಲ್ಲಿ ನಡೆದಾಗ!!

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...