Friday, December 13, 2019

ಕವಿತೆ: ಸಾಧನಕೇರಿ

                 'ಸಾಧನಕೇರಿ'

'ಬಾರೊ ಸಾಧನಕೇರಿಗೆ'!  ವರಕವಿಯ ಸ್ವಾಗತದೋಲೆಗೆ!
ಮನಮಿಡಿದು, ಕುಣಿದು ಜಪಿಸಿತ್ತು!
ಈ ದಿವ್ಯ ಚಣಕೆನೆ ತಪಿಸಿತ್ತು!

'ಮೇಘದೂತ'ನು ಅರಸಿ ಬಂದು!
'ನಾದಲೀಲೆ'ಯ ರಂಗು ತಂದು!
'ಗರಿ'ಬಿಚ್ಚಿ ನಿಂತು ಕುಣಿಯೆ ನವಿಲು! 
ಎನಿಸಿದೆ 'ಮತ್ತೆ ಶ್ರಾವಣ ಬಂತು'!

'ಮುಕ್ತಕಂಠ'ದ 'ಬಾ ಹತ್ತರ' ದನಿಗೆ,
'ಉತ್ತರಾಯಣ' ಮುಗಿದು ನಡೆದು
'ನಮನ' ಸಲ್ಲಿಸೆ, 'ಶ್ರೀಮಾತಾ' ಗುಡಿಗೆ!
'ಹೃದಯ ಸುಮುದ್ರ'ದ 'ಮರ್ಯಾದೆ'ಯೆಡೆಗೆ!!

'ನಾಕುತಂತಿ'ಯ ಮೀಟಿ ಮಿಡಿದು!
'ಸಖೀಗೀತ'ದ ಸರಸ ಹೊನಲು!
'ಜೀವಲಹರಿ'ಯ ಪಡೆದು ಬೆಳೆದು
'ಗಂಗಾವತರಣ!' ಧುಮುಕಿ ನಗಲು!

'ಅರಳು ಮರಳು' 'ಉಯ್ಯಾಲೆ' ಯಾನ!
ನಡುವೆ 'ಒಲವೇ ನಮ್ಮ ಬದುಕು'
'ಮುಗಿಲ ಮಲ್ಲಿಗೆ' ಕಾಂತಿ ಸೊಗಕೆ
'ಚೈತ್ಯಾಲಯ'ದ ಶಾಂತಿ ಹೊದಿಕೆ!!

ವರಕವಿಯ ಪುಣ್ಯಧಾಮದಿ, ಮರೆತೆಲ್ಲ ಜಗವ ಆರಾಮದಿ
ಪಡೆದ ಕೆಲ ರಸನಿಮಿಷ ಸಾಕು
ನೆನೆದ ಸುಖ ಸವಿನೆನಪು ಸಾಕು
ಧನ್ಯನಾದೆನು ದತ್ತನೆ!  ಅಂಬಿಕಾತನಯದತ್ತನೆ!

ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೨೪/೧೧/೧೯

ಪ್ರೇರಣೆ: ವೈಷ್ಣವಿ ಗಡದ್ ಮದುವೆಯ ಸುಸಂದರ್ಭದಲ್ಲಿ, ವರಕವಿ ಬೇಂದ್ರೆಯವರ ಜೀವನದ ಕೇಂದ್ರಬಿಂದು ಸಾಧನಕೇರಿಗೆ ಕುಟುಂಬ ಸಮೇತ ಭೇಟಿ ನೀಡುವ ಸದಾವಕಾಶ ದೊರೆಯಿತು. ಆ ಅವಿಸ್ಮರಣೀಯ ಅನುಭವದ ಭಾವವರ್ಷವೆ ಈ ಕವನ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...