ಅಪ್ರಮೇಯ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಮೆಲ್ಲ ಮೆಲ್ಲ ಮೆಟ್ಟಿಲೇರೊ
ಮುದ್ದು ಕಂದ ನೋಡೆ ಚಂದ
ಮನದ ತುಂಬ ದಿವ್ಯಾನಂದ
ಎಡರು, ತೊಡರು ನೋಡಿ ದಾಟಿ
ಪುಳಕಗೊಂಡು ಹಿಗ್ಗಿ ನಲಿವೆ
ಏಳು-ಬೀಳು ಬಿಡದೆ ಸಾಗಿ
ದಿಗಿಲಿನಲ್ಲು ಸೊಗಸ ಮೆರೆವೆ!
ತೊದಲು ನುಡಿಯನಾಡೊ ವಯಸು
ಒಂಟಿ ಇದ್ದು ನುಗ್ಗೊ ಹುರುಪು
ಏನೆ ಇರಲಿ ’ತನ್ನ’ ಕನಸು
ಹಿಡಿದ ಛಲವ ಬಿಡದ ಮನಸು
ಸಣ್ಣದೊಂದು ಬಾಲ ಲೀಲೆ
ಅಲ್ಲಿ ಕೂಡ ಬಾಳ ಬೋಧೆ
ಎನಿತು ರಮ್ಯ, ಅಪ್ರಮೇಯ
ದಿಟ್ಟ ಧ್ಯೇಯ, ಚೆಲುವ ರಾಯ!
ನೋಡಿದಷ್ಟು ಭವ್ಯ ಬದುಕು!
ಬೆದಕಿದಷ್ಟು ಆಳ ಬದುಕು!
ಮಗುವಿನಲ್ಲು, ಮೆಟ್ಟಿಲಲ್ಲು
ತೋರುತಿಹುದೆ ಹೊಸತು ಬೆಳಕು!
ರಚನೆ - "ಸಂತ" (ಸಖರಾಯಪಟ್ಟಣ)
ತಾರೀಖು - ೦೧/೦೭/೧೫
ಪ್ರೇರಣೆ: ತುಷಾರ ಕಾವ್ಯ ಸ್ಪರ್ಧೆ ... ಮನೆಯ ಹೊಸ್ತಿಲನು ದಾಟಿ ಹೋಗಲು ಯತ್ನಿಸುತ್ತಿರುವ ಪುಟ್ಟ
ಮಗುವಿನ ಚಿತ್ರ
No comments:
Post a Comment