ರತಿಕೃತಿ
ನಸುಕಿನ ಮಸಕು ಮೆಲ್ಲನೆ ಜಾರುತಿರೆ,
ಜಿಗಿಜಿಗಿದು ಮಳೆ ಹನಿಯು ಬುವಿಗೆ ಇಳಿಯುತಿರೆ!
ಕಾರ್ಮೋಡದಾಕಾಶ ತುಸು ನೀಲಿ ಆಗುತಿರೆ,
ಬಾನಾಡಿ ಹಾರುತಲಿ ತಂಪೆಲರು ಬೀಸುತಿರೆ,
ಸರಿಗಮ ಪದನಿಸ ಮಿಡಿಯುತಿರೆ ಶೃತಿ,
ಕಂಗೊಳಿಸಿ ರತಿ, ಮೂಡುತಿದೆ ಕೃತಿ!
ಓ.........
ಶೃಂಗಾರ ಕಾವ್ಯ, ತಂದ ಮಳೆರಾಯ!
ಬಯಕೆಗಳಿಗೆ ರಂಗೇರಿ ಮತ್ತೇರಿಪ ಮಾಯ!
ಝಣಝಣ ಝಣಝಣ ಸದ್ದಿನ ಕಾಲ್ಗೆಜ್ಜೆ ನಾದ!
ತಕಧಿಮಿ ತಕಧಿಮಿ ಎನ್ನುತ ಕುಣಿಸುತಿಹ ಪ್ರಾಯ!
ಚಿಟಪಟ ಚಿಟಪಟ ಸೋನೆಗೆ ಚಡಪಡಿಕೆ ಗಾಯ
ಕಿಲಕಿಲ ಕಿಲಕಿಲ ನಗುವಲ್ಲಿ ಉನ್ಮಾದ ಮೋದ!
ಭರ-ಭರ ಸರ-ಸರ ಬಳುಕುತೆ ಉಬ್ಬುಬ್ಬುತ ದೇಹ
ಕಸಿವಿಸಿ, ಹಸಿಬಿಸಿ ಧಮನಿಗೆ ಆಲಂಗಿಸೆ ಕಾಯ!
ತೆರೆ-ಮರೆ, ಮರೆ-ತೆರೆ, ಸೇರುತ ಉಳಿದೆಲ್ಲವು ಮಾಯ!
ಪರಿಪರಿ ’ಸರಿ’ ’ಸರಿ’ ಕೂಡುತ ಇಬ್ಬೊಡಕದ ಗೇಯ!
ಬಗೆ ಬಗೆ ಹೊಸ ಬಗೆ ಅರಸುತ ಮುನ್ನುಗವ ಓಟ!
ಬಲೆ ಭಲೆ ಬಲೆ ಭಲೆ ಹಾಡುತ ಒಳಹೊರಗಿನ ಆಟ
ಗಿರಿ ಗವಿ, ಸರಿ, ಝರಿ ಜಿಗಿಯುತ ರೋಮಾಂಚನ ಮಾಟ
ಕಲೆ ಮಲೆ ಮಳೆ ಹೊಳೆ ಮಿಥುನದಿ ಸಮ್ಮೋಹನ ಕೂಟ!
ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೦೧/೦೮/೧೫
ಪ್ರೇರಣೆ: ತುಷಾರ ಕಾವ್ಯ ಸ್ಪರ್ಧೆ ಇರಬಹುದು...ನೆನಪಿಲ್ಲ
No comments:
Post a Comment