Saturday, December 14, 2019

ಕವಿತೆ: ಸ್ನೇಹ-ಪ್ರೇಮ

        ಸ್ನೇಹ-ಪ್ರೇಮ


ನಿಮ್ಮ ಸ್ನೇಹ, ಪ್ರೇಮ ಒಲಿದು ಬಾಳ ವಿಕಸನ, ತಾರಣ
ನಮ್ಮ ಬಂಧ, ಬೆಸುಗೆ ಮೆರೆದು ಬದುಕು ನಂದನ, ಮಧುವನ!

ನಿಮ್ಮ ಕಲೆತು ಹರಟುತಿರಲು ಮಧುರ ನೆನಪಿನ ದೂಮರ
ನೆನಪಿನಾಗಸದಲ್ಲಿ ನಲಿಯೆ ಭವ್ಯ ಕನಸಿನ ಸಾಗರ
ಹೃದಯ ಹೃದಯ ಮೀಟಿ ಮಿಡಿದು ಪ್ರೇಮಲೋಕದ ಸಂಭ್ರಮ
ಮನಸು ಮನಸು ಅರಿತು ಬೆರೆತು ಸ್ನೇಹಲೋಕವೆ ಅನುಪಮ

ನಿಮ್ಮ ಕೂಡಿ ಸಾಗುತಿರಲು ಪಯಣ ಸುಂದರ ವಿಸ್ಮಯ!
ನಿತ್ಯ ನಿಮಿಷ ಹರುಷ ಚಿಮ್ಮಿ ಸುಖದ ಸಂಪದ ಸಂಚಯ
ಮೃದುಲ ಮಲ್ಲಿಗೆ ಜೀವ ಘಮಿಸಿ ಪ್ರೇಮಲೋಕದ ಪರಿಮಳ
ವಿಮಲ ನಿರ್ಮಲ ಭಾವ ಬೆರೆತು ಸ್ನೇಹಲೋಕವೆ ಅಸದಳ

ಎನ್ನ ಯಾನಕೆ ನಿಮ್ಮ ತಾನವು ಸೇರಿ ಶೃತಿ ಲಯ ಸಿಂಚನ
ಬೆಸುಗೆ ಆಣತಿ ಒಪ್ಪಿ ಆಕೃತಿ, ಕೂಟ, ಗಾಯನ, ಮಂಥನ
ಅಮರ, ಅಮೃತ, ಮಧುರ ಮಾರುತ, ಪ್ರೇಮ ಲೋಕದ ಔತಣ
ದಿವ್ಯ ಸುಕೃತ, ಸ್ವರ್ಗ ಸದೃಶ, (ಈ)ಸ್ನೇಹ ಲೋಕದ ದಿಬ್ಬಣ!


ರಚನೆ - "ಸಂತ" (ಸ.ಗು.ಸಂತೋಷ್)
ತಾರೀಖು - ೧೬/೧೦/೨೦೧೪

ಪ್ರೇರಣೆ:
ಸ್ನೇಹ ಪ್ರೀತಿಯನ್ನು ನಿಸ್ವಾರ್ಥದಿಂದ ಯಥೇಚ್ಚವಾಗಿ ಎರೆದು ನನ್ನ ಬಾಳನ್ನು ಬೆಳಗಿಸಿದ ಎಲ್ಲ ಜೀವದಾತರಿಗೆ ಈ ಕವನವನ್ನು ಸಮರ್ಪಿಸುತ್ತೇನೆ

ಪದಾರ್ಥ:
ವಿಕಸನ - ಅರಳುವುದು; ತಾರಣ - ನಡೆಸುವಿಕೆ, ನಡೆಸುವಾತ;
ದೂಮರ - ತುಂತುರು ಮಳೆ; ಸಂಪದ - ಸಿರಿ, ಐಶ್ವರ್ಯ; ಸಂಚಯ - ಸಮೂಹ;
ಮೃದುಲ - ಕೋಮಲವಾದ; ಅಸದಳ - ಅತಿಶಯ; ಅಸಾಧಾರಣ ಮಹಿಮೆ;
ಸಿಂಚನ - ತುಂತುರು ಸುರಿಯುವುದು; ಆಣತಿ - ಅಪ್ಪಣೆ; ಸುಕೃತ - ಅದೃಷ್ಟ;
ಸದೃಶ - ಸಮಾನವಾದುದು; ದಿಬ್ಬಣ - ಉತ್ಸವ

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...