Saturday, July 11, 2020

ಕವಿತೆ: ಮಾನಸಿ ಸುಧೀರ

"ಮಾನಸಿ ಸುಧೀರ"

ಎಂಥಾ ಅದ್ಭುತವು, ಇವರು ಎಂಥಾ ಅದ್ಭುತವು!
ಕಲಾಸಂಗಮದಪೂರ್ವ ಸೃಷ್ಟಿ!

ಹೃನ್ಮನ ವಿಕಸನ ಗೆಲ್ಮೆಯ ಚರಿತೆ
ತನ್ಮಯಗೊಳಿಪ ಸುಂದರ ಕವಿತೆ
ಎತ್ತೆತ್ತೆತ್ತಲೊ ಹುಡುಕುವಿರೇಕೆ?
ತಾಯಿಯ ಮಡಿಲೊಳೆ ಇಹುದೀ ರೇಖೆ!

ಕನ್ನಡ ಮಣ್ಣಿನ ಕಡಲಿನ ತೀರದ
ಅನಂತ ಕೃಷ್ಣನ ಪಾವನ ಬೀಡಿನ
ನೃತ್ಯ ನಿಕೇತನ, ಅಲ್ಲಿನ ಚೇತನ!
ಕಲಾ ತಪಸ್ವಿ ಮಾನಸಿ ಸುಧೀರ!

ವೀಣಾಪಾಣಿಯ ಸುಸ್ಮಿತ ಮೊಗದಿ!
ನವರಸ ಭಾವದ ನಟನೆಯ ಘನದಿ!
ಮಂಜುಳ ಗಾನದ ಸುಮಧುರ ಸ್ವರವು!
ನಾಟ್ಯ ವಿಲಾಸದ ರಸದೌತಣವು!

ಬಡವ ಬಲ್ಲಿದ ಎಲ್ಲರ ನಡುವೆ!
ಅಗಣಿತ ಮಕ್ಕಳ ಪ್ರಗತಿಯ ಗುರುವೆ!
ಕಾವ್ಯ-ಕಥನದ, ನಟನೆ ರಮಣಿಯೆ!
ನಮ್ಮ ನಾಡಿನ ದೈವದ ವರವೇ!!


ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೦೪/೦೭/೨೦೨೦

ಪ್ರೇರಣೆ: ಕರುನಾಡಿನಲ್ಲಿ ಕಲೆಗಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಸಾಧಕರಲ್ಲಿ  ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಮಾನಸಕ್ಕೆ ಹತ್ತಿರವಾಗಿರುವ ಕೆಲವರಲ್ಲಿ, ನನ್ನರಿವಿಗೆ ಬಂದಿರುವವರಲ್ಲಿ ನೀವು ಒಬ್ಬರು.

ನನ್ನ ಶ್ರೀಮತಿಯು ನೀವು ಮಕ್ಕಳಿಗಾಗಿ ಕಥೆಗಳನ್ನು ಹೇಳುವ ವಿಶೇಷ ಬಗೆಯನ್ನು ಪರಿಚಯಿಸಿದಾಗ ಆಶ್ಚರ್ಯ, ಆನಂದ ಉಂಟಾಯಿತು.

ನಿಮ್ಮ ಕಲಾಸೇವೆಯ, ಸಮಾಜ ಸೇವೆಯ ಚರಿತೆಯನ್ನು "ರಿಪೋರ್ಟ್ ಟಿವಿ"ಯಲ್ಲಿ ನೋಡಿದಾಗ ಬಹಳ ಹೆಮ್ಮೆಯೆನಿಸಿತು, ಗೌರವಾದರ ಅನೇಕಪಟ್ಟು‌ ಹೆಚ್ಚಾಯಿತು.

ಅದನ್ನು ಕವಿತೆಯಾಗಿಸಿ ನಿಮಗರ್ಪಿಸುವ ಮನಸಾಯಿತು, ಭಾವ ಕವನವಾಯಿತು🙏🏻😊

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...