ಹೊಸ ಕವಿತೆ
ಬರೆವೆಯೇನು ಹೇಳು ನೀನು, ನಾನು ಮೆಚ್ಚೊ ಹೊಸತು ಕವಿತೆ!
ಚಿಮ್ಮಿ ಬರುತ ಸುಗಮವಾಗಿ ನಿನ್ನ ಮನದ ಭಾವದೊರತೆ!
ಕಹಿಯ ಹೊರೆಯ ಭಾರವಿಳಿಸಿ
ಅರಸಿ, ಹಚ್ಚಿ ಹೊಸತು ವಿಷಯ
ಸ್ಫುರಿಸಿ ಹರ್ಷ, ಸೊಗದ ಸ್ಪರ್ಷ
ಸರಿಸಿ ಮನದ ಮಸಕು ತೆರೆಯ
ಜಗವ ತೊಳೆವ ಉಷೆಯ ಕಾಂತಿ
ತೊಡಿಸಿ ಅಟ್ಟಿ ಭೀತಿ, ಭ್ರಾಂತಿ
ಪೂರ್ಣಚಂದ್ರ ಚೆಲ್ಲೊ ಶಾಂತಿ!
ಮೆರೆಸಿ, ಮರೆಸಿ ವ್ಯರ್ಥ ಕ್ರಾಂತಿ!
ಅಂದ, ಚಂದ, ಸೊಬಗು, ಮೆರುಗು
ಸೃಷ್ಟಿ ಚೆಲವಲೆಲ್ಲ ಬೆರೆಸಿ!
ಭಾವ ಸುಮದ ಚೆಲವು ಕಂಪು
ತಂಪಿನೆಲರು ಬಳಸಿ, ಘಮಿಸಿ!
ಜಟಿಲ ಭಾಷೆ ದೂರವಿಟ್ಟು,
ಸರಳ ಪದದ ಮಾಲೆ ಕಟ್ಟಿ!
ನೆಮ್ಮಿ ಹೊಸತು ಬಗೆಯ ಸೃಷ್ಟಿ
ಹನಿಸಿ, ಹರಿಸಿ ಗೆಲವ ವೃಷ್ಟಿ!
ಸಂತ ಪಂಥಕಾಚೆ ನಿಂತು
ಜನರ ಮನದ ಕದವ ತಟ್ಟಿ!
ಹಳೆಯ ಭಾವ, ಹೊಸತು ಜೀವ
ಬೆಳೆಸಿ ನವನವೀನ ದೃಷ್ಟಿ!
ರಚನೆ: "ಸಂತ" (ಸ.ಗು ಸಂತೋಷ್)
ತಾರೀಖು: ೧೫/೧೧/೨೦
ಪ್ರೇರಣೆ: ನನ್ನ ತಂದೆ ನನ್ನ ಕವನಗಳ ಹರಿವು ಬಹಳ ಸರಾಗವಾಗಿರಲಿ, ಭಾಷೆ ಸರಳವಾಗಿರಲಿ ಎಂದು ಹೇಳಿದಾಗ ಹೊಮ್ಮಿದ ಕವಿತೆ
No comments:
Post a Comment