Saturday, November 28, 2020

ಕವಿತೆ: ಆ ಹೆಸರು

 ಆ ಹೆಸರು!


ಎರಡಕ್ಷರದಲ್ಲೆಲ್ಲವೂ ಉಂಟು, ಬೇಕೇನೇನು ನೀ ಹೇಳು?


ಕವಿಗಳು ಬೇಡುವ, ಕವಿಗಳ ಕಾಡುವ ಲೋಕ ವಿಹಾರವೆ ಇದು ಕೇಳು!


ಮನಸಿಗೆ ರುಚಿಸುವ, ಕಚಗುಳಿ ಇರಿಸುವ

ಹೃದಯದ ಹಾಡನು ಇಂಪಲಿ ಮೆರೆಸುವ

ಪರಿಪರಿ ಸೊಗಸಲಿ ಮೀಯಿಸಿ, ತೋಯಿಸಿ

ಬಗೆಬಗೆ ರೂಪವ,  ನಿರೂಪದೆ ತೋರುವ!


ನೋಟವು ಬಯಸುವ, ಹೃನ್ಮನ ನಲಿಸುವ

ರವಿ, ಶಶಿ, ತಾರೆಯ, ಗಿರಿ, ಝರಿ, ಭೂಮಿಯ

ಕಾನನ, ಖಗಮಿಗ, ರಮ್ಯೋದ್ಯಾನದ

ಸೃಷ್ಟಿಯ ವಿಸ್ಮಯ ಚಣದಲೆ ತೋರುವ!!


ಬಯಕೆಯ ಬಳ್ಳಿಯ ಹಬ್ಬಿಸಿ, ಉಬ್ಬಿಸಿ      

ಸಂತಸ ಕಡಲಿನ ಒಡಲನು ತುಂಬುವ

ಮೆರುಗಿನ ಮೇರೆಗೆ ಕ್ಷಿತಿಜವ ದಾಟಿಸಿ

ಬೆರಗಿನ ತೇರಿಗೆ ಸಾರಥಿಯಾಗುವ


ಮೂರಕ್ಷರದೊಳು ತಾನಿರೆ ಕನಸು!

ನಾಲ್ಕಕ್ಷರದಲಿ ಇದು ಹೊಂಗನಸು!

ಅಕ್ಷರ ಮಾಯೆಯ ವಿನೋದದ ಸೊಗಸು!

ಐದಕ್ಷರವೆನೆ ನಿಜ ಸವಿಗನಸು!


ರಚನೆ: 'ಸಂತ' (ಸ.ಗು ಸಂತೋಷ್)

ತಾರೀಖು: ೨೮/೧೧/೨೦


ಪ್ರೇರಣೆ: ನಾಳೆ ಗೆಳತಿ ಸ್ವಪ್ನಳ ಹುಟ್ಟು ಹಬ್ಬ. ಇದ್ದಕ್ಕಿದ್ದಂತೆ ಆ ಪದ ಆಕರ್ಷಿಸಿತು. ಎರಡಕ್ಷರದಲ್ಲಿನ ಸೊಗಸಿನ ಅಗಾಧತೆ ಬೆರಗುಗೊಳಿಸಿತು.

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...