ಕನಸು ಕಲ್ಪನೆಯ ಲೋಕದಲ್ಲಿ ವಿಹರಿಸುವ ಓ ಸಂಚಾರಿ
ಹೇಗಾದೆ ಏಕಾಂಗಿ? ಇರಲೇಬೇಕಲ್ಲ ನಿನ್ನ ಆ ಸಹಚಾರಿ
ಎಲ್ಲಿರಲಿ ಎಂತಿರಲಿ ತಾ ಒಡನೆ ಪುಟಿದೆದ್ದು ಕುಣಿಯುವ
ಕುಣಿದು ಕುಪ್ಪಳಿಸಿ ಕುಣಿಸಿ ನಲಿಸುತ ತಣಿಸುವ
ಇಂತಿರಲಿ, ಅಂತಿರಲಿ ತಾ ಅರಳಿ ಕಂಪಡರಿ ಸ್ಫುರಿಸುವ
ಸ್ಫುರಿಸಿ ಕೆಣುಕುತ ಕಾಡಿ ಉನ್ಮಾದ ಉಣಿಸುವ
ನಿನ್ನ ಆ ಸಹಚಾರಿ, ಇರಲು ಹೇಗಾದೆ ನೀ ಏಕಾಂಗಿ
ಹಗಲಿರಲಿ, ಇರುಳಿರಲಿ, ನಿತ್ರಾಣ ಇಲ್ಲದೆಯೆ ಹರಿಯುವ
ಹರಿದು ಬೆಳೆಯುತ ಬಳುಕಿ ಬಳಸುತ ನುಲಿಯುವ
ಮಡಿಲಿನಲಿ, ಮನಸಿನಲಿ ಜೀವಿಸುತ ಭಾವದಲೆ ತೇಲುವ
ತೇಲಿ ಗೆಲವಲಿ ಆಡಿ ಕಲ್ಪನೆಯ ತೆರೆಸುವ
ನಿನ್ನ ಆ ಸಹಚಾರಿ, ಇರಲು ಹೇಗಾದೆ ನೀ ಏಕಾಂಗಿ
ಹುಟ್ಟಿರಲಿ, ಸಾವಿರಲಿ , ಸಮಚಿತ್ತ ತೋರುತ ಸಾಗುವ
ಸಾಗಿ ಸಲಹುತ ಮಿನುಗಿ ಬೆಳಗುತ ಬಾಳುವ
ಬದುಕಿನಲಿ, ಬೆದಕಿನಲಿ ಭಾವಿಸುತ ಜೀವಪಥ ಮೆರೆಸುವ
ಮೆರೆಸಿ ಸುಖಿಸುತ ಹಾಡಿ ಕನಸುಗಳ ಸೃಜಿಸುವ
ನಿನ್ನ ಆ ಸಹಚಾರಿ, ಇರಲು ಹೇಗಾದೆ ನೀ ಏಕಾಂಗಿ
No comments:
Post a Comment