ಭಲೇ ಭಲೇ ಬಾಲೆಯರು!!
ನೋಡುವಿರೇನು?! ಕೇಳುವಿರೇನು?! ನಾವೆಯೆ ಭಲೇ ಭಲೇ ಬಾಲೆಯರು!
ವಿಸ್ಮಯ ಲೋಕವ ಇದ್ದೆಡೆ ತೋರಿಸಿ ರಂಜಿಸಿ, ಕಾಡುವ ತ್ರಿವಳಿಯರು!
ಎಲ್ಲಿಗೆ ಹೋದರು ನಡೆವುದು ನಮ್ಮದೆ ಮೈತ್ರಿಯ ಭರ್ಜರಿ ದರ್ಬಾರು!
ಗೆಳೆತನ ಎಂದರೆ ಹೀಗಿರಬೇಕು
ಸ್ವಲ್ಪವೂ ಇಲ್ಲದೆ ತಕರಾರು!
ಅಪ್ಪ-ಅಮ್ಮನ, ಅತ್ತೆ-ಮಾಮನ ಒಲವಿನ ಬಳ್ಳಿಯ ಸುಮಗಳು ನಾವು
ಎಲ್ಲಿಯೆ ಇದ್ದರೂ, ಹೇಗೆ ಇದ್ದರೂ
ಮನಸಿನ ಒಳಗಡೆ ಸ್ನೇಹದ ಠಾವು!
ಗೀತ ರಸಾಯನ, ನಾಟ್ಯ, ಪಾರಾಯಣ, ಎಲ್ಲಾ ಉಂಟು ನಮ್ಮಲ್ಲಿ!
ಬೇಕೇನೇನು ಹೇಳಲು ದೊರೆವುದು ರಸವ್ಯಂಜನವೆ ಚಣದಲ್ಲಿ!
ಆಟಿಕೆ ಇದ್ದುದ ಹಂಚಿಕೊಳ್ಳುವೆವು, ಇದ್ದವುಗಳನೆ ಮೆಚ್ಚಿ ಆಡುವೆವು!
ಗಲಾಟೆ ವಾದ್ಯಕೆ ಸವಾಲು ಎಸೆದು, ಆ ಸದ್ದನ್ನಡಗಿಸಿ ಮಿಂಚುವೆವು
ಸದ್ದಿಲ್ಲದೆಯೆ ಹೊರಗೆ ಜಾರುವೆವು
ಸುದ್ದಿ ಮಾಡದೆ ಮೆಲ್ಲ ಮರಳುವೆವು!
ಹೊಟ್ಟೆಗೆ, ಬಟ್ಟೆಗೆ ತಲೆಯನು ಕೊಡೆವು! ಒಟ್ಟಿಗೆ ಇದ್ದರೆ ಸಾಕೆಮಗೆ!
ನೀನೆನಗಾದರೆ ನಾನಿನಗೆನ್ನುವ ನೀತಿಯ ಬಂಧನ ನಮಗಿಲ್ಲ
ತಿಳಿಸದೆ ತಿಳಿಯುವ, ಬಯಸದೆ ನಡೆಸುವ ನಿರ್ಮಲ ಬಂಧವೆ ನಮಗೆಲ್ಲ
ಸ್ನೇಹದ ಸೇತುವೆ, ಪ್ರೀತಿಯ ಸಿಂಧು!
ಹೀಗೆಯೆ ಬೆಳೆಯಲಿ, ಬೆಳಗಲಿ ಮುಂದೂ!
*ಸೃಷ್ಟಿ-ಸನ್ನಿಧಿ-ಸ್ತುತಿ* ಯ ಸಂಗಮ! ಸಂಭ್ರಮ ಇರಲಿದು ಎಂದೆಂದೂ!!
ಕನಸಿನ ಊರಿಗೆ, ಸೊಗಸಿನ ತೇರಲಿ
ಸಾಗುವ ಎಲ್ಲರೂ ಕೂಡಿಯೆ ನಾವು!
ಬನ್ನಿರಿ, ಹರಸಿರಿ, ಹಿರಿಯರೆ ನೀವು
ನಿಮ್ಮಿಂದಲ್ಲವೆ ನಮಗೆ ಕಾವು!!
ರಚನೆ: "ಸಂತ"
ತಾರೀಖು: ೧೦/೦೭/೨೦೨೨
ಪ್ರೇರಣೆ: ಭಲೇ ಭಲೇ ಬಾಲೆಯರಾದ ಸನ್ನಿಧಿ-ಸೃಷ್ಟಿ-ಸ್ತುತಿಯರ ಅಪೂರ್ವ ಸ್ನೇಹ😊



No comments:
Post a Comment