Wednesday, January 25, 2023

ಕವಿತೆ: ಹದಿನೇಳೆಂಟು

 ಹದಿನೇಳೆಂಟು - ಮಲ್ಲಿಗೆ ಮಾಲೆ!


ಕನಸಿನ ತೀರಕೆ ಸಾಗಿಹ ಯಾನ

'ಹದಿನೇಳೆಂಟು', ಮೊದಲ ನಿಲ್ದಾಣ!

ಇಲ್ಲಿನ ಗೆಲುವಿಗೆ ಸಂಭ್ರಮ ಗಾನ

ಹೃನ್ಮನವಾಗುತ ರಮ್ಯೋದ್ಯಾನ!


ಸುಮಧುರ, ಸುಲಲಿತ, ನಿರ್ಮಲ ಮೈತ್ರಿ

ಎಂಥಹ ಸುಂದರ ಸೃಷ್ಟಿಗೆ ಧಾತ್ರಿ!

ಬೆಳೆಸುತ, ಬೆಳೆಯುವ ಅನನ್ಯ ಪ್ರೀತಿ

ನೀಡುವ ಕೊಡುಗೆಗೆ ಇದುವೆಯೆ ಸಾಕ್ಷಿ!


ಇಲ್ಲದ ಸಲ್ಲದ ನೆಪದಲಿ ತೂರಿ

ಕಾಡುವ, ಕೊರೆಯುವ ಹೊರೆಯಂಬಾರಿ!

ಇಳಿಸುತ, ಅಳಿಸುತ, ಕಸುವನು ತೋರಿ

ನೆಟ್ಟಗೆ ಸಾಗಲು ರಣ ಜಯಭೇರಿ!!


ಕರ್ಮಠ, ತವಸಿಯ ಸಂಗವೆ ಯೋಗ

ನಿತ್ಯೌಪಾಸನೆ, ಚಿತ್ರಾನುರಾಗ!

ಒಲ್ಲದ ಎಡೆಯೊಳು ಸಂಯಮ, ಧ್ಯಾನ!

ಇದ್ದೆಡೆ ಹೀಗೆಯೆ ಬಿರುದು ಸನ್ಮಾನ!!


ಈಗ,

ಭಾಗ್ಯದ ಅರರಿಗೆ ತೋರಣ ಹಸಿರು

ಮನದಂಗಳದಲಿ ಚೈತ್ರದ ಚಿಗುರು

ಬದುಕಿನ ಒಡಲಿಗೆ ಚಂದದ ಉಡುಪು

ನಿತ್ಯೋಲ್ಲಾಸಕೆ 'ಮಲ್ಲಿಗೆ' ನೆನಪು


ಬಂದೇ ಬಿಟ್ಟಿತು ಹೊರಡುವ ಸಮಯ

ಹಾಗೂ ಸಂತಸ, ಮಿಡಿದೆದೆ ಹೃದಯ!

ದೂರದ ಯಾನವು, ಇನ್ನೂ ಉಂಟು

ಶುರುವಿದು ಅಷ್ಟೆ *ಹದಿನೇಳೆಂಟು* !


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೨೩/೧೧/೨೦೨೨


ಪ್ರೇರಣೆ: ನಮ್ಮೆಲ್ಲರ ಚಿತ್ರ "ಹದಿನೇಳೆಂಟು", ಆತ್ಮೀಯ ಪೃಥ್ವಿಯ ಸಾರಥ್ಯದಲ್ಲಿ ಅಪಾರ ಜನಮನ್ನಣೆಯನ್ನು ಗಳಿಸಿದ ಗೋವಾದಲ್ಲಿನ ೨೦೨೨ರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮಧುರ ಕ್ಷಣಗಳನ್ನು ನೆನೆಯುತ್ತ, ನಮ್ಮ ಇಡೀ ಚಿತ್ರ ಬಳಗಕ್ಕೆ ವಂದಿಸುತ, ಅಭಿನಂದಿಸುತ, ಗೆಳೆಯ ಪೃಥ್ವಿಗೆ ಕೃತಜ್ಙತೆಗಳನ್ನು, ಮೆಚ್ಚುಗೆಯನ್ನು ಸಲ್ಲಿಸುತ, ಆದರ್ಶ ಸೋದರ, ನೆಚ್ಚಿನ ತೇಜಸ್ವಿಯ ಹರಸುತ್ತ, ಈ ನೆನಪಿನ ಮಲ್ಲಿಗೆ ಮಾಲೆಯನ್ನು ಕಟ್ಟಿಕೊಳ್ಳುತ್ತ ಮೂಡಿದ ಸಾಲುಗಳಿವು... 

ಮತ್ತೆ ಎಲ್ಲರೂ ಸಿಗೋಣ🙏🙏🙏

 

ಎಲ್ಲರಿಗೂ ಶುಭವಾಗಲಿ 😌🙏❤️👍🏻

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...