Friday, January 3, 2025

ಕವಿತೆ: ಪೂರ್ವ ಪಶ್ಚಿಮ

 

********

ಪೂರ್ವ-ಪಶ್ಚಿಮ!


'ತೇಜೊ'ವಿನ ನಾಡಿನಲಿ‌ ತೇಜಸ್ವಿ ಸೂರ್ಯ!

ಅಸ್ತಮಿಪ ದೃಶ್ಯದಲಿ ಕಾಣುತಿದೆ ಭವಿತವ್ಯ!


ಪಶ್ಚಿಮದ ಪಶ್ಚಿಮದಿ ಕೆಂಬಣ್ಣದಾಕಾಶ

ಪೂರ್ವದಲಿ ತೋರುತಿದೆ ಸುಪ್ರಕಾಶ

ಮೂಜಗದಿ ಹೊಳೆಹೊಳೆದು ಬೆಳಗಿದೆಲ್ಲಾ ವೇಷ

ಮೂಡಣದಿ ಹಗಲಿರದೆ ಎಲ್ಲಾ ನಿಶ್ಯೇಷ!


ಕಲಿಯುಗದ ಯುಗಧರ್ಮ, ಎಲ್ಲೆಡೆ ಅರ್ಧಸತ್ಯ

ಹಗಲಿರುಳಿನನುಪಾತ ಬದಲಾಗುತಿದೆ ನಿತ್ಯ

ಬಂಡಾಯದಮಲಿನಲಿ ಕಮರುತಿದೆ ವಿಭ್ರಾಂತಿ!

ಕ್ರಾಂತಿಯ ಕಡಲಿನಲಿ ಮುಳುಗುತಿಧ ಚಿರಶಾಂತಿ


ನೆನ್ನೆಗಳು ಮುಗಿದಿರುವ, ಇಂದಿನ ಈ ವೇಳೆ 

ಕೌತುಕವೆ ಎಲ್ಲರಿಗೆ ಹೇಗಿರಬಹುದೊ ನಾಳೆ!

ಕನಸುಗಳ ಬೆನ್ನೇರಿ ತಲುಪಿರಲು ನಡುಗಡಲು

ತಟಸೇರಲೆನೆ ಬೇಕು ನಿತ್ಯವೂ ಹೊಸಹಗಲು!


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೩೧/೧೨/೨೦೨೪


ಪ್ರೇರಣೆ: ಆತ್ಮೀಯ ವಿನುತಳ ಪೋರ್ಚುಗಲ್ಲಿನ ಸೂರ್ಯಾಸ್ತದ "ರವಿಯ ಬೆಳಕಿನ ಕೆಳಗೆ" ಕವಿತೆ ಹಾಗೂ ಅದರೊಂದಿನ ಭಾವಚಿತ್ರ🙏😌



*******

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...