ಕವಿಶೈಲ
ಭಾರತಾಂಬೆಯ ಮಡಿಲ, ಕನ್ನಡಾಂಬೆಯ ಒಡಲ
ಪಡುಮಲೆಯ ಅಡಿಗಡಿಗೆ ರಸಗಂಗೆ ಪ್ರವಹಿಸುತ
ಭೂರಮೆಯು ಮೈದಳೆದು ರಮಿಸುತಿರೆ ತಣ್ಣಗೆ!
ಮಾತಿಲ್ಲಿ ಮೈಲಿಗೆ, ಮೌನ ಜಾಜಿ ಮಲ್ಲಿಗೆ!!
ಕಣ್ಮುಚ್ಚಿ, ತುಟಿಬಿಗಿದು, ಧ್ಯಾನಿಸಲು, ಆಲಿಸಲು
ಕವಿವಾಣಿ, ಋಷಿವಾಣಿ ಸಂದೇಶ ಧ್ವನಿಸುತಿರೆ
ಕನ್ನಡದ ನರುಗಂಪು ಪಸರಿಸುತ ಬೆಚ್ಚಗೆ
ನುಡಿಯ ಹಿಂಡು ಮೈಲಿಗೆ, ಮೌನ ದುಂಡು ಮಲ್ಲಿಗೆ!!
ಕಣ್ಮುಚ್ಚಿ, ಕಣ್ತೆರೆದು ಪ್ರಾರ್ಥಿಸಲು, ಪೂಜಿಸಲು
ಗಿಣಿವಾಣಿ, ಗೀರ್ವಾಣಿ ಸಂಗೀತ ಸ್ಫುರಿಸುತಿರೆ
ಮಲೆನಾಡನಾವರಿಸಿ ಹಬ್ಬುತಿರೆ ಮೆಲ್ಲಗೆ
ಅನ್ಯ ಹಾಡು ಮೈಲಿಗೆ, ಮೌನ ಕಾಡು ಮಲ್ಲಿಗೆ!!
ಬೆಳಗು, ಬೈಗು, ಇರುಳ ಕಳೆ
ಮೋಡ, ಮಳೆ, ಮಿಂದ ಇಳೆ
ನಿಚ್ಚಹಸಿರು ಬಟ್ಟೆ ಉಟ್ಟು,
ಚೆಲವಿನೊಲವ ಪ್ರೀತಿ ನೆಟ್ಟು
ಬಳುಕಿಬಾಗಿ ಸುಖದ ಹುಟ್ಟು
ಬೆಳೆದು ಸಗ್ಗ ಹಿಗ್ಗಿಗೆ!
ಸಖ್ಯ, ಕೂಡಿ ಮಾತಿಗೆ, ಮೌನ ಮುತ್ತು ಮಲ್ಲಿಗೆ
ನೆನೆನೆನೆದು, ತಣಿದಣಿದು
ಅಂತರಂಗ ಮಥಿಸುತ
ನುಡಿಚಿಮ್ಮಿ, ಗುಡಿನೆಮ್ಮಿ
ಹೊಚ್ಚೆದೆಯು ಹಚ್ಚಿರಲು
ತನುಮನವ ಬೆಳಗುತಿರೆ ಕನ್ನಡದ ದೀವಿಗೆ
ಯುಕ್ತ ಮಾತು ಹೋಳಿಗೆ, ಮೌನ ಸೂಜಿ ಮಲ್ಲಿಗೆ!!
ಸಮಯ ಸಾಗಿ, ಮನವು ಮಾಗಿ,
ಭಾವತೋಟದಲ್ಲಿ ತೂಗಿ
ಕ್ರಾಂತಿ, ಭ್ರಾಂತಿಯನ್ನು ತೊರೆದು,
ಶಾಂತ ರೀತಿಯನ್ನು ತಳೆದು
ಮನುಜಮತದ, ವಿಶ್ವಪಥದ
ದೀಕ್ಷೆ ತೊಟ್ಟು , ಹಾಕಿ ಹುಟ್ಟು
ಸಿಕ್ತ ಮಾತು, ಮುಕ್ತಿಗೆ, ಮೌನ ನಿತ್ಯ ಮಲ್ಲಿಗೆ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೩/೧೧/೨೦೨೪
ಪ್ರೇರಣೆ: ಈ ವರ್ಷದ ರಾಜ್ಯೋತ್ಸವದ ಸಂಭ್ರಮವನ್ನು ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ, ಕವಿಶೈಲದಲ್ಲಿ ಪಡೆದ ಅನುಭವದ ಅನುಭಾವವೆ ಈ ಕವನ.

No comments:
Post a Comment