Wednesday, June 18, 2025

ಕವಿತೆ: ಪೂರ್ವಿ

 ಹೃತ್ಪೂರ್ವಕ ಅಭಿನಂದನೆಗಳು ರಶ್ಮಿ... ಮೊದಲು ತಾಯಿಗೆ😊🤝👏🏻


ಮೊನ್ನೆ ಮೊನ್ನೆಯಷ್ಟೆ ನಿಮ್ಮ ಮನೆಯಲ್ಲಿ ಪೂರ್ವಿ ಕಾಲೇಜಿಗೆ ಸೇರಿದ್ದರ ಕುರಿತು ಮಾತನಾಡಿದ ನೆನಪಾಗುತ್ತದೆ. ಎಷ್ಟು ಬೇಗ ಸಮಯ ಓಡುತ್ತಿದೆ ಎನಿಸಿತು. 

ಈಗಷ್ಟೆ ಅಮ್ಮ, ಅಣ್ಣನಿಗೆ ಪೂರ್ವಿಯ ಸಾಧನೆಯ ಬಗ್ಗೆ ತಿಳಿಸಿದೆ. ಹರ್ಷಿಸಿದರು. ಶುಭಾಶೀರ್ವಾದಗಳನ್ನು ತಿಳಿಸಿದರು.


ನಮ್ಮ ಪೂರ್ವಿಗೆ ಈ ಸಾಧನೆಗೆ ಅಭಿನಂದನೆಗಳು👏🏻👏🏻🤝 ನೃತ್ಯಗಾರ್ತಿಯಾಗಿ ಅವಳು ಮಾಡಿರುವ ವಿಶೇಷ ಸಾಧನೆಯ ಜೊತೆಜೊತೆಗೆ ಓದಿನಲ್ಲಿ ಮಾಡಿರುವ ಈ ಸಾಧನೆ ಕಂಡು ಬಹಳ ಸಂತೋಷವಾಯ್ತು.


ಅವಳ ಹೆಸರಿಗೆ ಅನುರೂಪಳಾಗಿ ಅವಳು ಗಂಭೀರ, ಶಾಂತ ಸ್ವಭಾವ ಎನಿಸಿತ್ತು... 

ಈ ಯಶಸ್ಸು ಹಾಗೂ ಅವಳ ಹೆಸರಿನ ಪ್ರೇರಣೆಯಿಂದ ಮೂಡಿರುವ ಸಾಲುಗಳಿವು... ಅವಳಿಗೆ ಶುಭಾಶಯಗಳನ್ನು ಕೋರುತ್ತ, ನಿಮ್ಮೆಲ್ಲರ ಸಂಭ್ರಮದಲ್ಲಿ ಭಾಗಿಯಾಗುತ್ತ... ಒಟ್ಟಿಗೆ ಸಿಹಿಸವಿಯೊ ಆಶಯವ ಹೊತ್ತು...



            ಪೂರ್ವಿ


ಇಂದಿಗೆ ಬಲು ಅಪರೂಪ 'ಪೂರ್ವಿ'ಯ ಆಲಾಪ

ರಾಗ ಗಂಭೀರ, ಶಾಂತ, ಅತೀಂದ್ರಿಯ ವಿನ್ಯಾಸ!


ಶ್ರೀರಾಮನವಮಿಗೊ, ಮಾರ್ನವಮಿಗೊ ಇದರ ಮಾಧುರ್ಯ

ಆಲಿಸಲು ಧನ್ಯತೆ, ಪುನೀತ, ಉಲ್ಲಸಿತ ಆಂತರ್ಯ


ತಾಯಿ ಮಡಿಲಿನ ಕುಡಿಯರಳಿ ಘಮಿಸುತಿಹ ಸೊಬಗು!

ಎನಿತೊ ಬಯಕೆಗಳು ನೆರವೇರಿ ಮೂಡಿಸಿಹ ಬೆಡಗು 

ವಿಜಯ ಉತ್ಸವದ ಸಂಭ್ರಮದೆ ಕಾಣುತಿಹ ಮೆರುಗು

ಮಿನುಗಿ ತಂಪೆರೆದು ಎಲ್ಲೆಡೆಯು ಮೂಡಿಸಿಹ ಬೆರಗು!


ಮೆರೆದು, ಪರಿಣತಿಯ, ಪ್ರೌಢಿಮೆಯ, ಬೆಳಗುತಿಹ ಮನಸು

ಮಿಂದು, ಸರಸತಿಯ ಅನುಗ್ರಹದಿ ಮಿನುಗುತಿಹ ಸೊಗಸು!

ಜಯಿಸಿ, ಅನವರತ ಪರಿಶ್ರಮದಿ, ಕಂಗೊಳಿಸಿಹ ನನಸು!

ಗಳಿಸಿ, ಎಲ್ಲರೆಡೆ ಮೆಚ್ಚುಗೆಯ,

ನೆನ್ನೆಗಿದುವೆ ಕನಸು!


ರಚನೆ: "ಸಂತ" (ಸ.ಗು ಸಂತೋಷ್)

ತಾರೀಖು: ೨೨/೦೪/೨೦೨೫


ಮುಂಬರುವ ದಿನಗಳು ಹೆಚ್ಚಿನ ಯಶಸ್ಸು, ಸಂತೋಷ, ನೆಮ್ಮದಿಯನ್ನು ನೀಡಲಿ ಎಂದು ಹಾರೈಸುತ್ತೇನೆ🙏

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...