ಅಪರ್ಣ ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ.
ಅವರು ನಿರೂಪಣೆ ಮಾಡಿದ ಎಷ್ಟೋ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನೋಡುತ್ತ, ಅವರ ಕನ್ನಡವನ್ನು ಬಹುವಾಗಿ ಮೆಚ್ಚುತ್ತ, ವಾಗ್ಮಿತೆಯನ್ನು ಕಂಡು ಬೆರಗಾಗುತ್ತ, ಸ್ಫೂರ್ತಿ ಪಡೆಯುತ್ತ, ಕನ್ನಡತನವನ್ನು ಮೈಗೂಡಿಸಿಕೊಳ್ಳುತ್ತ ಪಯಣ ಸಾಗಿಸಿದವನು ನಾನು🙏
ಅವರಿಗೆ ನನ್ನ ನುಡಿನಮನ:
"ನಮ್ಮ ಅಪರ್ಣ"
ಅಪ್ರತಿಮ ಕನ್ನಡತಿ, ಅದ್ಭುತ ನಿರೂಪಕಿ, ಕರುನಾಡಿನ ಹೆಮ್ಮೆ 'ನಮ್ಮ ಅಪರ್ಣ'
ಇವರ ಜೇನ್ದನಿ ಕೇಳಿಸದೆ, ಕನ್ನಡದ ಸಂಭ್ರಮವದಿನ್ನು ನಿಜ ಅಪೂರ್ಣ!
ಕನ್ನಡದ ನಿತ್ಯೌಪಾಸನೆಯ ಮೆರೆದ ಸೌಜನ್ಯ ಮೂರ್ತಿಗೆ ಈ ಅಂತ್ಯ ಸಮ್ಮತವೆ?
ತಾಯಿ ಭುವನೇಶ್ವರಿಯ ಮುಡಿಯನೇರಿದ ಘನ ಸುಮಕೆ ಇದುವೆ ಸದ್ಗತಿಯೆ?!
ದುರ್ವಿಧಿಯ ಅಟ್ಟಹಾಸಕೆ, ಅಟಾಟೋಪಕೆ ಈಗ ಕೊನೆಯೆಂಬುದೆಲ್ಲುಂಟು!
ದುರುಳ, ದುಷ್ಟರ ಕೈಹಿಡಿವ ಕಲಿಗಾಲವಿದು, ಸತ್ಪ್ರಜೆಗೆ ಬದುಕು ಎಲ್ಲುಂಟು?!
ಕನ್ನಡದ ಜೀವ ಆಗಿರಲು ಸ್ತಬ್ಧ, ಕಾಡಿಹುದು ಬಿಸಿಮೌನ, ಮನಸು ಪ್ರಕ್ಷುಬ್ಧ
ಹುಟ್ಟಿ ಬಂದರೆ ಮತ್ತಿವರು, ಕನ್ನಡದ ಸಿರಿಯಾಗಿ ನೀಗಬಹುದೆ ನಮ್ಮ ಪ್ರಾರಬ್ಧ?!
ಮರ್ತ್ಯಲೋಕದಾಚೆ ಕನ್ನಡದ ಬಳಗದಲಿ ಇನ್ನಿವರ ಭೂಮಿಕೆ, ಇದು ವಿಧಿಲಿಖಿತ!
ರಸಋಷಿಯ, ವರಕವಿಯ
ದಿವ್ಯಸನ್ನಿಧಿಯಲ್ಲಿವರ ಸಿರಿವಾಣಿಯ ದಿಬ್ಬಣ, ನಿಶ್ಚಿತ!
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೧/೦೭/೨೦೨೪
ಪ್ರೇರಣೆ: ನನ್ನ ಅಚ್ಚುಮೆಚ್ಚಿನ ನಿರೂಪಕಿ, ಹೆಮ್ಮೆಯ ಕನ್ನಡತಿ ಅಪರ್ಣ ಅವರ ಅಂತಿಮಯಾತ್ರೆಗೆ ನನ್ನ ಭಕ್ತಿಪೂರ್ಣ ನುಡಿನಮನ🙏

No comments:
Post a Comment