*ಅನುಭವ ಮಂಟಪ*
ದೇಶ ವಿದೇಶದಿ ಜೀವನ ಮಂದರ
ಮಥಿಸಿ ಮೂಡಿರುವ ಅನುಭವ ಮಂಟಪ
ಎಲ್ಲೇ ಇದ್ದರೂ ಪರರಂತಾಗದೆ
ಇರುವರು ಇವರು ಎಂದಿನಂತೆ
ನಡೆಸುತ ನೆಚ್ಚಿದ ರೀತಿ ನೀತಿಗಳ
ತಾಯಿ ಭಾರತಿ ಎಂದೂ ಒಪ್ಪುವಂತೆ
ಮನೆ ಮಂದಿರದಿ ಶ್ರೀಕೃಷ್ಣನ ವಾಸ
ಮನೆಯಂಗಳದಲಿ ಸದಾ ಪ್ರಕಾಶ
ಭಿತ್ತಿಗೆ ಭೂಷಣ ಕಲೆಯಾಭರಣ
ಸ್ವರಾಭಿಷೇಕದಿ ಪಾವನ ಹರಣ
ನಿರ್ಮಲ ಮನದೊಳು ನಿತ್ಯ ನಿವೇದನೆ
ನುಡಿ-ಗುಡಿ-ನಾಡೆನೆ ಸರ್ವ ಸಮರ್ಪಣೆ
ಮಧುರ ಸ್ನೇಹದಿ ಸಹಜ
ಸಂವೇದನೆ
ಇಂದ್ರಿಯಕೌತಣ ರಾಗೋಪಾಸನೆ
ರಚನೆ: 'ಸಂತ' (ಸ.ಗು ಸಂತೋಷ್)
ತಾರೀಖು: ೧೪/೦೫/೨೦೨೫
ಪ್ರೇರಣೆ: ಅಮೇರಿಕಾದಲ್ಲಿನ ಗೆಳೆಯ ಸುಧೀರ್ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದಾಗ ಅಪೂರ್ವ ಅನುಭವ.
ಇನಿತು ಮುಜುಗರ ಇಲ್ಲದೆ ಹೋದೆ, ಅಲ್ಲಿನ ಭಾರತೀಯತೆಯ ಮೆರುಗನ್ನು ಸವಿದೆ, ಸುಂದರವಾಗಿ ಸಜ್ಜಾದ ಮನೆ, ದೇವರ ಮಂಟಪದಿ ಮುರುಳಿಲೋಲನ ಸುಂದರ ಮೂರ್ತಿ, ಸೋದರಿ ರಕ್ಷಾ ಅವರ ಅದ್ಭುತ ಕಲಾಕೃತಿಗಳು, ಆತ್ಮೀಯವಾಗಿ ಉಣಬಡಿಸಿದ ಪುಷ್ಕಳ ಭೋಜನ, ಅನ್ವಿತಾಳ ಕನ್ನಡ ಪ್ರೀತಿ, ಸಂಗೀತ ಗಾಥೆ, ಪುಟ್ಟ ಅನೀಷನ ತುಂಟಾಟ ಎಲ್ಲವನ್ನೂ ಆಸ್ವಾದಿಸಿ, ಮಧುರ ಸ್ನೇಹದಿ ಮಿಂದು ಹಗುರ ಮನಹೊತ್ತು ಮರಳಿದೆ.

No comments:
Post a Comment