ಶೂನ್ಯ ಪರ್ವ
ನೀ ಹೇಳದ, ನಾ ಕೇಳದ, ನಾ ಹೇಳದ, ನೀ ಕೇಳದ
'ಶೂನ್ಯ ಪರ್ವ'ವಿದು ಸಂತ
ಬೇಕೆನ್ನದೆ, ಬೇಕೆನಿಸುವ, ಸಾಕೆನ್ನದೆ, ಸಾಕೆನಿಸುವ
ಏಕಾಂತದ ಹಂತ!
ನೆನ್ನೆಗಳು, ನಾಳೆಗಳು ಎನ್ನುತ ಇಂದಿಗೆ
ಇದ್ದರೂ ಇಲ್ಲವೇ ಇಷ್ಟದ ಇರುವಂತಿಗೆ!
ಇಂದಿನದೆ ಇಂಬೆಂದು, ಅಂದೆಂದು ಮೈಲಿಗೆ
ಮುಂದಿನದು ಬೇಡೆಂದು ಇಂದಿನದು ಇಲ್ಲಿಗೆ!
ನನ್ನವಿದು, ನಿನ್ನವಿದು ಎನ್ನುತ ಸುಮ್ಮನೆ
ನಮ್ಮವನು ಕಾಣದೆಯೆ ಎಲ್ಲವೂ ಬಿಮ್ಮನೆ
ಇರದಿದ್ದರೇನಿಂದು, ಎಷ್ಟಿದ್ದರೇನಂದು,
ಇದ್ದವೂ ಇಲ್ಲಿಂದು ಏನೊಂದು ಒಟ್ಟಿಗೆ!
ಅದರಿಂದ, ಇದರಿಂದ, ಎಂದಿರದೆ ವಿಶ್ವಾಸ
ಗ್ರಹಕೂಟ, ವಿಧಿಯಾಟ ಇಂದೆಲ್ಲ ಆಭಾಸ
ಅಂದಿಗೆನೆ ಇಂದೊಗೆದು, ಇಂದಿಗೆನೆ ಒಗೆದಂದು
ಬಾಳಿದರೆ ಜೀವನವೆ? ಬಾಳಿಸದೆ ನಂದನವೆ?
ರಚನೆ: ಸಂತ (ಸ.ಗು ಸಂತೋಷ್)
ತಾರೀಖು: ೨೩/೦೬/೩೦೨೫
ಪ್ರೇರಣೆ:
೧೯/೦೪/೨೦೨೫ ರಂದು ಗೆಳತಿ ವಿನುತ ಕಳುಹಿಸಿದ ಸಂದೇಶ
Finally done, Santosh😅.. fully occupied with this...
......
ಎಂಥಹ ಕಾಕತಾಳೀಯ ವಿನುತ ಇದು...
ನೆನ್ನೆ ಕಛೇರಿಗೆ ಹೋಗುವಾಗ ದಾರಿಯಲ್ಲಿ ಮೂಡಿದ ಸಾಲುಗಳಿವು.
*ನೀ ಬರೆಯದ, ನಾ ಬರೆಯದ ಶೂನ್ಯ ಪರ್ವವಿದು ಗೆಳತಿ
ಬೇಕೆನ್ನದೆ, ಬೇಕೆನ್ನುವ ಏಕಾಂತದ ಸರತಿ!*
ಈ ಎರಡು ಸಾಲುಗಳನ್ನು ಬರೆಯಲು ಮುಖ್ಯ ಸ್ಫೂರ್ತಿಯಾಗಿದ್ದು ನೀನು.
ಈಗ ಇಲ್ಲಿನ 'ಶೂನ್ಯ ಪರ್ವ'ವು ಇನ್ನೊಂದೆಡೆ 'ವಿಜಯ ಪರ್ವ'ವಾಗಿ ರೂಪುಗೊಂಡಿದೆ. ಇದೇ ಬದುಕಿನ ಸೊಗಸು ಅಲ್ಲವೇ
ನಿನ್ನ ಸಾಧನೆಯ ಬಗ್ಗೆ ನನಗೆ ಬಹಳ, ಬಹಳ ಖುಷಿ ಹಾಗೂ ಹೆಮ್ಮೆ ವಿನುತ. ಹೃತ್ಪೂರ್ವಕ ಅಭಿನಂದನೆಗಳು
"ಸಕಲ ಕಲಾ ವಲ್ಲಭೆ"ಗೆ ನಮೋ, ನಮೋ🙏
ನಿನ್ನ ಕಲಿಕೆ, ತನ್ಮೂಲಕ ಕಲಾ ಸೇವೆ, ಸಮಾಜಮುಖಿ ಕಾರ್ಯಗಳು ಹೆಚ್ಚು ಹೆಚ್ಚು ನೆರವೇರಲಿ ಎಂದು ಮನಸಾರೆ ಹಾರೈಸುತ್ತೇನೆ🙏
No comments:
Post a Comment