Saturday, June 23, 2018

ಕವಿತೆ: "ಅನಂತ ಲೀಲೆ"


              "ಅನಂತ ಲೀಲೆ" 
                 ******
ಯಾರು ತಾನೆ ಅರಿಯ ಬಲ್ಲ ನಿನ್ನ ಮಾಯೆ ಓ ಅನಂತ
ಎಲ್ಲೋ ಸುಳಿಯು, ಎಲ್ಲೋ ತಿಳಿಯು, ಎಲ್ಲ ಸೂತ್ರ ನಿನ್ನ ಬಳಿಯು!

ಪ್ರೀತಿ ಎರೆವ ಮನಗಳಲ್ಲಿ ಕನಲು, ಭೀತಿ ಭಾವ ತಂದೆ!
ಶಾಂತಿ ಬಯಸೊ ಎದೆಗಳಲ್ಲಿ ನೋವ ಪೂರ ಹರಿಸಿ ನಿಂದೆ!
ಯಾವ ಜೀವ ಹರುಷಕೆಂದು ನಿನ್ನ ಲೀಲೆ ಹೀಗೆ ಕಾಣೆ
ಒಲುಮೆ ನಾದದೆದೆಯ ಒಳಗೆ ಕರುಳ ಕದಡೊ ರುದ್ರ ವೀಣೆ!

ದೈವ ನೆನೆದು ನಡೆಯುವಲ್ಲಿ, ಶಂಕೆ-ಶೂಲ ತೂರಿ ಇರಿದೆ!
ಹೇಗೊ ಸೊಗಸು ಚಿಗುರಿದಲ್ಲಿ, ಜೀವ ಚಿವುಟಿ ಇರುಳ ಸುರಿದೆ!
ಯಾರ ನಲಿವು ಲಾಸ್ಯಕೆಂದು ಇಲ್ಲಿ ಯುಗಳ ಶೋಕ ಗೀತೆ
ನಲಿವು ಹನಿಸಿದೆದೆಯ ಮೇಲೆ, ಮಸಿಯ ಚೆಲ್ಲಿ ಎರಡು ರೇಕೆ!

ನಿನ್ನ ಕವಿಯ ಹೃದಯದಲ್ಲಿ, ಉಂಟು ದಿವ್ಯ ಭಾವ ಜೋಗ
ಆದರಿಲ್ಲಿ ಶೂನ್ಯ ಭಾವ, ಅಮೆಯ ತುಂಬೊ ಮೌನರಾಗ
ಯಾವ ಬಾಳು ಬೆಳಗಲೆಂದು, ಇಲ್ಲಿ ಬರಿಯ ನೋವ ಕಂತು!
ಶಾಂತಿ ತೋರು, ಸುಖವ ನೀಡು, ಇಲ್ಲ ಕಡಿಯೊ ಜೀವ ತಂತು!!

       ರಚನೆ - ’ಸಂತ’ (ಸ.ಗು.ಸಂತೋಷ್)
       ತಾರೀಖು - ೦೧/೦೫/೨೦೦೯

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...