Saturday, June 23, 2018

ಕವಿತೆ: ಸೇರುವೆನು ನಿನ್ನ...!

                 ಸೇರುವೆನು ನಿನ್ನ...!

   ಎಲ್ಲೇ ಇರು ನೀ ಸೇರುವೆನು ನಿನ್ನ
   ನೀನಿರೆ ಜೊತೆಯಲ್ಲಿ ಬಾಳಾಗ ಚೆನ್ನ

ಮುಸ್ಸಂಜೆ ಬಾನಿಗೆ ಚೆಲ್ಲಿದ ರವಿ ಕೆಂಪು
ಆ ಸೊಬಗ ಪೆಂಪಿನಲಿ ರಾಗರತಿಯ ಜೊಂಪು
ನಲಿದುಲಿದು ಹಾರುತಿರೆ ಗೂಡಿಗೆ ಗಿಳಿ ಗುಂಪು
ಆ ಸೊಗದ ಎಲರಲ್ಲಿ ನಿನ್ನದೆ ಕಂಪು!

ಮೇಘ ಮಂದಾರವದು ಇಳೆಗಿಳಿಯೆ ನೋಡು
ಹುಣ್ಣಿಮೆಯ ಚಂದಿರನ ಜೊನ್ಮಳೆಯ ಹಾಡು
ಬೃಂದಾವನದಲ್ಲಿ ಚೆಲುವೊಲವಿನ ಹೊಂಪು
ಬಯಸಿದೆ ಮನವೀಗ ನಿನ್ನೊಡಲ ಸೊಂಪು!

ಗಾಳಿಗೋಪುರ ಕಟ್ಟಿ ಅಂದು ಅಗಲಿ ನಿಂತೆ
ಕನಸೆಲ್ಲ ಕರಗಿತು, ಬಾಳೆಲ್ಲ ಚಿಂತೆ
ನೆನಪಿನ ಕಡಲಲ್ಲಿ ತೇಲಿ ಮನವೀಗ
ತವಕಿಸಿದೆ ಬಾ ನೀರೆ, ಮರುಮಿಲನಕೆ ಬೇಗ!

ಮುಂಜಾನೆ ಆಗಸಕೆ ರವಿ ಕಾಂತಿ ಜಳಕ
ಜಗ ಮಿಂದು ಅದರಲ್ಲಿ ಮೈಮನಕೆ ಪುಳಕ
ಹೂಬನದಿ ಹೊಸ ಚಿಗುರು, ಬಂದಿತು ಹೊಸ ನೀರು
ಸೇರುವೆವು ಮತ್ತೊಮ್ಮೆ ಮೊಳೆಯುವುದು ಬೇರು!

                                ರಚನೆ - ’ಸಂತ’(ಸ.ಗು.ಸಂತೋಷ್)
                                ತಾರೀಖು - ೨೫/೦೫/೦೫

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...