Saturday, June 23, 2018

ಕವಿತೆ: ಹರಿನಾಮ ಸ್ಮರಣೆ

                  ಹರಿನಾಮ ಸ್ಮರಣೆ

ಹರಿ...., ನಿನ್ನ ನಾಮದ ಸ್ಮರಣೆ ಮಾಡುತಲಿರೆ ಇಂದು
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಮಂತ್ರ ಮೊಳಗಿರೆ, ಧೂಪ ಕಂಪಿರೆ, ಹಣತೆ ಬೆಳಗುತಿರೆ,
          ಮುರುಳಿ ಮೋಹನ ವೇಣು ನಾದವು ಕರಣವ ತುಂಬುತಿರೆ,
          ಹೃನ್ಮನ ತಣಿಸುತ, ಭಾವ ಬೆಳಗುತ, ಸಂಧ್ಯೆಯು ನಲಿಸುತಿರೆ,
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಬಾಲ ಕೃಷ್ಣನ, ತುಂಟ ಕೃಷ್ಣನ, ಲೀಲೆಯ ಓದುತಿರೆ,
          ನಂದಗೋಪನ, ಯಶೋದ ಕಂದನ, ತೂಗುತ ಪಾಡುತಿರೆ,
          ಮುದ್ದು ಮೊಗವ, ಬೆಣ್ಣೆ ಮೂರ್ತಿಯ, ನೋಡುತ ನಲಿಯುತಿರೆ,
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಮಥುರ ವಂಶದ, ಕಂಸ ಧ್ವಂಸದ, ಚರಿತೆಯ ಕಾಣುತಿರೆ
          ಕಾಳಿಂಗ ಮರ್ದನ, ಗಿರಿ ಗೋವರ್ಧನ, ಕೀರುತಿ ಸಾರುತಿರೆ
          ಯೋಗ ಇಂದ್ರನ, ಪ್ರೇಮ ಲೀಲೆಯ, ಚಂದನ ಚೆಲ್ಲುತಿರೆ
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!

          ಕೌರವ ಪಾಂಡವ, ಬಳಗದ ಕಾಳಗ, ಭಾರತ ಕುಣಿಯುತಿರೆ
          ಬಾಳ ವ್ಯೂಹದ, ಗೀತ ಸಾರದ, ದರುಶನವಾಗುತಿರೆ
          ಮುಕ್ತಿ ಮಾರ್ಗವೆ, ಹರಿಯ ಸದನವೆ, ತೋರೆನೆ ಬಾಗುತಿರೆ
          ಪೇಳಲಾರೆ ಎನಿತು ಸುಖವೊ, ಅಸುಖ ಬಾಳಿನೊಳು!


                                 ರಚನೆ: ’ಸಂತ’ (ಸ.ಗು ಸಂತೋಷ)
                                              ತಾರೀಖು: ೨೬/೦೮/೦೫

ಪ್ರೇರಣೆ: ಆತ್ಮೀಯ ಗೆಳೆಯ ಸುಧೀರ್ ಜೊತೆ ಜರ್ಮನಿಯ ಸ್ಟುಟ್‌ಗಾರ್ಟ್‌ನಲ್ಲಿ ಗೋಕುಲಾಷ್ಟಮಿಯನ್ನು ಆಚರಿಸಿದ ಸವಿಕ್ಷಣಗಳ ಪ್ರೇರಣೆಯಿಂದ ಮೂಡಿದ ಕವನವಿದು.

No comments:

Post a Comment

ಅರವತ್ತರ ಮಿತ್ರ ಬಳಗ

        ಅರವತ್ತರ ಮಿತ್ರ ಬಳಗ ಮಿತ್ರರೊಡಗೂಡಿ,  ಹರಟುತಡಿಗಡಿಗೆ, ದೊರೆತ ಪ್ರತಿ ಘಳಿಗೆ ಕಳಚಿ ಬೀಳುತಲಿ ಚಿಂತೆಗಳ ಕಂತೆ ಹಗುರಾಗುತಿದೆ ಮನಸು, ಶಾಂತಿ, ನಿಶ್ಚಿಂತೆ! ಅರವತ್...